ʻಚೆನ್ನಮ್ಮಳ ಆಶೀರ್ವಾದ ಇದ್ರೆ ಸಾಕುʼ

ಚೆನ್ನಮ್ಮ
Advertisement

ಚೆನ್ನಮ್ಮನ ಕಿತ್ತೂರು(ಬೆಳಗಾವಿ): ಕಿತ್ತೂರು ಉತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬಹುತೇಕ ಎಲ್ಲರಲ್ಲಿದೆ. ಆದರೆ ನಾನಿದನ್ನು ನಂಬುವುದಿಲ್ಲ. ಕಳೆದ ಬಾರಿಯೂ ಕಿತ್ತೂರು ಉತ್ಸವಕ್ಕೆ ಬಂದಿದ್ದೆ. ಈಗಲೂ ಬಂದಿದ್ದೇನೆ. ಅಧಿಕಾರ ಹೋದರೆ ಹೋಗಲಿ ಕಿತ್ತೂರು ರಾಣಿ ಚೆನ್ನಮ್ಮಳ ಆಶೀರ್ವಾದ ನನ್ನ ಮೇಲಿದ್ದರೆ ಸಾಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಸೋಮವಾರ ರಾಜ್ಯಮಟ್ಟದ ಚೆನ್ನಮ್ಮನ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚನ್ನಮ್ಮನ ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬುದು ಮೂಢನಂಬಿಕೆ. ಇದಕ್ಕೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿ ಎರಡು ಬಾರಿ ಉತ್ಸವಕ್ಕೆ ಬಂದಿದ್ದೇನೆ ಎಂದರು.
ಕಿತ್ತೂರು ಬಳಿ ಇರುವ ಕೆಐಎಡಿಬಿ ಜಾಗೆಯಲ್ಲಿ 1000 ಎಕರೆ ಕೈಗಾರಿಕಾ ಟೌನ್‌ಷಿಪ್ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದರು.
ಧಾರವಾಡ-ಬೆಳಗಾವಿ ರೈಲು ಮಾರ್ಗವನ್ನು ಕಿತ್ತೂರು ಮಾರ್ಗವಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ಕೃಷ್ಷಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ ಎಂದರು.