ʼವಿಚಾರʼದಿಂದ ಮೋಹವನ್ನು ಗೆಲ್ಲು

Advertisement

ಸಂಸಾರದ ಮೋಹ ಎಷ್ಟು ತೀವ್ರವಾಗಿರುತ್ತದೆ ಎಂಬುದನ್ನು ಶ್ರೀ ರಾಮಕೃಷ್ಣ ಪರಮಹಂಸರು ಒಂದು ಹಾಸ್ಯದ ಮೂಲಕ ಹೇಳಿದ್ದಾರೆ. ಮಹಾವಿಷ್ಣುವು ಭೂಮಿಯನ್ನು ಉದ್ಧರಿಸುವುದಕ್ಕೋಸ್ಕರ ವರಾಹ (ಹಂದಿ) ಅವತಾರವನ್ನು ಧರಿಸಿ ಬಂದ. ಬಂದ ಕೆಲಸವಾದ ನಂತರ ಕೆಲವು ಕಾಲ ಇಲ್ಲಿಯೇ ಇದ್ದ. (ಒಂದು ಹೆಣ್ಣು ವರಾಹದೊಂದಿಗೆ) ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆದುಕೊಂಡು ಸಂಸಾರದ ಸುಖವನ್ನು ಅನುಭವಿಸುತ್ತ ಇಲ್ಲಿಯೇ ಇರತೊಡಗಿದನು. ದೀರ್ಘಕಾಲದವರೆಗೂ ವೈಕುಂಠಕ್ಕೆ ತಿರುಗಿ ಬರದಿರುವುದನ್ನು ನೋಡಿ ದೇವತೆಗಳು ಅವನನ್ನು ತಿರುಗಿ ಕರೆತರಲು ಶಿವನನ್ನು ವಿನಂತಿಸಿಕೊಂಡರು. ಶಿವ ಬಂದು ವರಾಹನನ್ನು ಮಾತನಾಡಿಸಿ ವೈಕುಂಠಕ್ಕೆ ತಿರುಗಿ ಬರುವಂತೆ ಹೇಳಿದರೆ ನಾನಿಲ್ಲಿ ಸುಖವಾಗಿದ್ದೇನೆ, ನಾನೆಲ್ಲಿಗೂ ಬರುವುದಿಲ್ಲ' ಎಂದು ಹೇಳಿದನಂತೆ. ಆಗ ಶಿವ ತನ್ನ ತ್ರಿಶೂಲದಿಂದ ವರಾಹನನ್ನು (ವರಾಹನ ಶರೀರವನ್ನು) ಸಂಹಾರ ಮಾಡಿದ. ವರಾಹ ಶರೀರದಿಂದ ಹೊರಬಂದ ಮಹಾವಿಷ್ಣುವು ನಗುನಗುತ್ತಾ ವೈಕುಂಠಕ್ಕೆ ಹೊರಟನಂತೆ. ಇದು ಎಲ್ಲಿಯೂ ಪುರಾಣದಲ್ಲಿ ಬಂದ ಕಥೆಯಾಗಿರಲಿಕ್ಕಿಲ್ಲ. ಆದರೆ ಸಂಸಾರ ಮೋಹ, ತನ್ನ ಮಡದಿ, ತನ್ನ ಮಕ್ಕಳು, ತನ್ನ ಮನೆ ಎಂಬ ಮಮಕಾರ ಭಗವಂತನನ್ನೇ ಒಮ್ಮೆ ಕಟ್ಟಿ ಹಾಕಿತೋ ಎಂಬಷ್ಟರ ಮಟ್ಟಿಗೆ ಗಾಢವಾಗಿರುತ್ತದೆ ಎಂಬುದು ಈ ಕಥೆಯ ತಾತ್ಪರ್ಯ. ಮೋಹಕ್ಕೆ ಪರಿಹಾರ ವಿವೇಕದ ವಿಚಾರ. ಸಂಸಾರವು ಶಾಶ್ವತವಲ್ಲ, ದೀರ್ಘಕಾಲ ಪರ್ಯಂತ ನಿಲ್ಲುತ್ತದೆಯೆಂದು ವಿಶ್ವಾಸವಿಡಲು ಬರುವಂಥದ್ದೂ ಅಲ್ಲ. ಮೂಲಭೂತವಾಗಿ ಶರೀರವೇ ಶಾಶ್ವತವಲ್ಲ. ಈ ವಾಸ್ತವಿಕತೆಗಳನ್ನು ಮನಸ್ಸಿಗೆ ತಂದುಕೊಳ್ಳಲು ಬೇಕಾಗುವ ಚಿಂತನೆಯೇ ಇಲ್ಲಿ ಹೇಳಿರುವವಿಚಾರ’.
ವಿಚಾರ' ಕ್ಕೆ ಯಾರು ಮಹತ್ವ ಕೊಡುತ್ತಾರೊ ಅವರು ಗೆಲ್ಲುತ್ತಾರೆ. ವಿಚಾರಕ್ಕೆ ಬದಲಾಗಿ ಮೋಹಕ್ಕೆ ಮಹತ್ವ ಕೊಡುವವರು ಸೋಲುತ್ತಾರೆ. ರಾಜನಿಗೆ ವಿಚಾರ ಸಮರ್ಥರಾದ ಮಂತ್ರಿಗಳು ಸಲಹೆಗಳನ್ನು ಕೊಡುತ್ತಾರೆ. ಅಂತಹ ಸಲಹೆಗಳಿಗೆ ಮಹತ್ವ ಕೊಡುವ ರಾಜನು ಗೆಲ್ಲುತ್ತಾನೆ. ತನ್ನ ಮೋಹಕ್ಕೆ ಒಳಗಾಗಿ ವಿಚಾರಪೂರ್ಣ ಸಲಹೆಗಳಿಗೆ ಮನ್ನಣೆ ಕೊಡದಿರವ ರಾಜನು ಸೋಲುತ್ತಾನೆ. ಇದಕ್ಕೆ ದ್ರೌಪದಿಯನ್ನು ಸೆಳೆದು ತರಲು ದುಃಶಾಸನನಿಗೆ ಆದೇಶ ಕೊಟ್ಟ ದುರ್ಯೋಧನ ಉದಾಹರಣೆ. ಹಾಗೆಯೇ ನಮ್ಮೆಲ್ಲರೊಳಗೆ ವಿಚಾರಪೂರ್ಣ ಸಲಹೆ ಕೊಡುವ ವಿದುರ, ಭೀಷ್ಮರು ಇದ್ದಾರೆ. ಮೋಹಕ್ಕೆ ಪುರಸ್ಕಾರ ಕೊಡುವ ದುಃಶಾಸನರೂ ಇದ್ದಾರೆ. ವಿಚಾರ’ ಎಷ್ಟು ಬೆಳೆಯಬೇಕೆಂದರೆ, ಅದರ ಪ್ರಾಮಾಣಿಕತೆಗೆ, ಪರಮಾತ್ಮ, ಜಗತ್ ಸೃಷ್ಟಿ ಮುಂತಾದ ದೊಡ್ಡ ವಿಷಯಗಳು ಪೂರ್ತಿ ಅರ್ಥವಾಗುವುದಿಲ್ಲ ಎಂಬುದು ಗೊತ್ತಾಗಬೇಕು. ಹಾಗೆಯೇ ಜೀವಾತ್ಮನ ಅಂದರೆ ನಮ್ಮೆಲ್ಲರ ಜನನ-ಮರಣಗಳು ಪೂರ್ತಿಯಾಗಿ ವಿಚಾರ' ದಿಂದಲೇ ಇತ್ಯರ್ಥವಾಗುವುದಿಲ್ಲ ಎಂಬುದೂ ಗೊತ್ತಾಗಬೇಕು. ತನ್ನ ಶಕ್ತಿಗೆ ಪೂರ್ತಿ ಅರ್ಥವಾಗದಿರುವ ಇಂತಹ ವಿಷಯಗಳು ಇವೆ ಎಂಬುದನ್ನು ಪ್ರಾಮಾಣಿಕವಾಗಿ ಸ್ವೀಕರಿಸುವವಿಚಾರ’ ಶಕ್ತಿ ಸಾಕಷ್ಟು ಬೆಳೆದಿದೆ. ಎಂದರ್ಥ.
ಇಂತಹ `ವಿಚಾರ’ ಶಕ್ತಿಯಿಂದ ಗಾಢವಾದ ಮೋಹವನ್ನು ಗೆಲ್ಲಬೇಕು. ಇದು ಸಾಧನೆ.