ಅಕಾಲಿಕ ಮಳೆಗೆ ನೆಲಕ್ಕುರುಳಿದ ಬಾಳೆ

Advertisement

ವಿಜಯಪುರ: ಭೀಕರ ಬರಗಾಲದಿಂದ ತೋಟಗಾರಿಕಾ ಬೆಳೆ ಉಳಿಸಿಕೊಳ್ಳುವಲ್ಲಿ ಬಸವಳಿದಿದ್ದ ರೈತರಿಗೆ ಶನಿವಾರ ಸಂಜೆ ಹಾಗೂ ರಾತ್ರಿ ವೇಳೆ ಅಕಾಲಿಕ ಗಾಳಿ ಮಳೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಾಳೆ, ಲಿಂಬೆ ಮೊದಲಾದ ತೋಟಗಾರಿಕಾ ಬೆಳೆಗಳು ನೆಲಕ್ಕುರುಳಿವೆ.
ಶನಿವಾರ ಸಂಜೆ ವೇಳೆಗೆ ಸ್ವಲ್ಪ ಮಟ್ಟಿನ ಮೋಡ ಕವಿದ ವಾತಾವರಣವಿತ್ತು. ರಾತ್ರಿ ೮ ಗಂಟೆ ಸುಮಾರಿಗೆ ಅಲ್ಲಲ್ಲಿ ಸ್ವಲ್ಪ ಗಾಳಿ ಮಳೆ ಪ್ರಬಲವಾಗಿ ಬೀಸಿದ ಪರಿಣಾಮ ವಿಜಯಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮುರುಗೆಪ್ಪ ಚೌಗಲೆ ಎಂಬ ರೈತರ ೧ ಎಕರೆ ೧೦ ಗುಂಟೆ ಜಮಿನಿನಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿ, ರೈತ ಮುರುಗೆಪ್ಪ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತ ಮುರುಗೆಪ್ಪ ಚೌಗಲೆ ಕಡಿಮೆ ಜಮಿನಿನಲ್ಲಿ ಉತ್ತಮ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದರು. ಸುಮಾರು ೧೮೦೦ ಬಾಳೆ ಬಡ್ಡಿ(ಗಿಡ)ಯನ್ನು ೩ ಲಕ್ಷ ರೂ ಕರ್ಚು ಮಾಡಿ ಸಾಕಷ್ಟು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಫಸಲು ತೆಗೆಯುವಲ್ಲಿ ಸಫಲರಾಗಿದ್ದರು. ಆದರೆ ಅಕಾಲಿಕವಾಗಿ ಬಿಸಿದ ಗಾಳಿ ಹಾಗೂ ಮಳೆಯಿಂದ ಬಾಳೆ ಬೆಳೆ ಪೂರ್ಣ ಪ್ರಮಾಣದ ಹಾನಿಗಿಡಾಗಿದೆ. ಸುಮಾರು ೫ ಲಕ್ಷ ರೂ ದಷ್ಟು ಬಾಳೆ ಬೆಳೆ ಹಾನಿ ಸಂಭಿಸಿದ್ದು, ಬರಗಾಲದಲ್ಲೂ ಕಷ್ಟಪಟ್ಟು ಬಾಳೆ ಬೆಳೆದಿದ್ದ ರೈತನನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಅಳಲು ತೋಡಿಕೊಂಡರು.