ಅಕ್ರಮ ದಂಧೆಗಳಿಗೆ ಅಧಿಕಾರಿಗಳ ಸಾಥ್: ತಾಲೂಕು ಬಂದ್ ಕರೆ ಎಚ್ಚರಿಕೆ

ಬನಹಟ್ಟಿ
Advertisement

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಅಕ್ರಮ ಸಾರಾಯಿ, ಅನ್ನಭಾಗ್ಯ ಅಕ್ಕಿ ಶೇಖರಣೆಯೊಂದಿಗೆ ಮಾರಾಟ, ಮಟ್ಕಾ ಹಾಗೂ ಇಸ್ಪೀಟ್ ಜೂಜಾಟ, ಮಾವಾ ಮಾರಾಟ ಸೇರಿದಂತೆ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಅಂಬೇಡ್ಕರ್ ಸೇನೆಯ ಉತ್ತರ ಕರ್ನಾಟಕದ ಅಧ್ಯಕ್ಷ ಶಿವಲಿಂಗ ಗೊಂಬಿಗುಡ್ಡ ಆರೋಪಿಸಿದರು.
ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಹಾರ ಇಲಾಖೆ, ತಹಶೀಲ್ದಾರ್‌, ಪೊಲೀಸ್, ಅಬಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ಒದಗಿಸಿದ್ದು, ಅಲ್ಲದೆ ಈ ಅನಧಿಕೃತ ಕಾರ್ಯಗಳು ಅಧಿಕಾರಿಗಳ ಮುಂದೆಯೇ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಸೋಜಿಗದ ಸಂಗತಿಯಾಗಿದೆ.
ಬನಹಟ್ಟಿ ಹಾಗೂ ಮಹಾಲಿಂಗಪುರ ಪಟ್ಟಣಗಳಲ್ಲಿ ರಾಜಾರೋಷವಾಗಿ ಜೂಜಾಟ ಸೇರಿದಂತೆ ಎಲ್ಲವೂ ನಡೆಯುತ್ತಿದೆ. ಅಕ್ರಮ ಮರಳು ಸಾಗಣೆ, ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇಟ್ಟಂಗಿ ತಯಾರಿಕೆ ಹೀಗೆ ಒಟ್ಟಾರೆ ಕಾನೂನು ಗಾಳಿಗೆ ತೂರಿ ತಾಲೂಕಿನಾದ್ಯಂತ ಅನಧಿಕೃತವಾಗಿ ಏನೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳ ಜಾಣ ಮೌನತನ ಸಂಶಯಕ್ಕೆ ಕಾರಣವಾಗಿದೆ ಎಂದು ಗೊಂಬಿಗುಡ್ಡ ಆರೋಪಿಸಿದರು.
ಅಧಿಕಾರಿಗಳ ಬೇಜವಾಬ್ದಾರಿತನದಿಂದ ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ಹಲವಾರು ಕುಟುಂಬಗಳು ಜೂಜಾಟ ಹಾಗು ಅಕ್ರಮ ಸಾರಾಯಿಯಿಂದ ಬೀದಿಗೆ ಬಿದ್ದಿವೆ. ತಕ್ಷಣವೇ ಅಧಿಕಾರಿಗಳು ಇವೆಲ್ಲದಕ್ಕೂ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅಂಬೇಡ್ಕರ್ ಸೇನೆ ಹಾಗೂ ಪ್ರಗತಿಪರ ಸಂಘಟನೆಗಳಿಂದ ರಬಕವಿ-ಬನಹಟ್ಟಿ ತಾಲೂಕು ಬಂದ್ ಕರೆ ಮಾಡಲಾಗುವುದೆಂದರು.