ಹಾವೇರಿ: ಯಾಲಕ್ಕಿ ಕಂಪಿನ ನಾಡು, ಕನಕ, ಶರೀಫ, ಸರ್ವಜ್ಞನ ಬೀಡು, ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅಖಿಲ ಭಾರತ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ರವಿವಾರ ಸಂಜೆ ಸಂಭ್ರಮದ ತೆರೆ ಕಂಡಿತು.
ಸಮ್ಮೇಳನದ ಕಡೆ ದಿನವಾದ ರವಿವಾರ ಲಕ್ಷಾಂತರ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಬೆಳಗಿನಿಂದ ಆರಂಭವಾದ ಜನರ ಆಗಮನ ಸಂಜೆವರೆಗೂ ಮುಂದುವರಿದಿತ್ತು. ರಾತ್ರಿ ಸಂಗೀತ ಕಾರ್ಯಕ್ರಮದಲ್ಲೂ ಜನ ಕಿಕ್ಕಿರಿದು ನೆರೆದಿದ್ದರು.
ಬೆಳಗಿನಿಂದ ನಡೆದ ಎಲ್ಲಾ ಗೋಷ್ಠಿಗಳು, ವಸ್ತು ಪ್ರದರ್ಶನದ ಮಳಿಗೆ, ಫಲಪುಷ್ಪ ಪ್ರದರ್ಶನ, ವಾರ್ತಾ ಇಲಾಖೆ ಪ್ರದರ್ಶನ, ಪುಸ್ತಕ ಪ್ರದರ್ಶನ ಸೇರಿದಂತೆ ಎಲ್ಲಾ ಕಡೆ ಜನಸಾಗರವೇ ಕಂಡು ಬಂತು. ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಜನ ಜಾತ್ರೆಯೇ ನೆರೆದಿತ್ತು.
ಕಡೆ ದಿನ ಕುಟುಂಬ ಸಮೇತರಾಗಿ ಬಂದಿದ್ದ ಜನತೆ ಇಡೀ ದಿನ ಸಮ್ಮೇಳನದ ಪ್ರಾಂಗಣದಲ್ಲಿ ಕಳೆದರು. ಎಲ್ಲಾ ಕಡೆ ಸುತ್ತಾಡಿ, ಊಟ ಮಾಡಿ ಮುಖ್ಯ ವೇದಿಕೆ ಮುಂಭಾಗದ ಹಸಿರು ಹೊದಿಕೆ ಮೇಲೆ ವಿಶ್ರಮಿಸಿ ಸಂಜೆ ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿ ಉಂಡು ರಾತ್ರಿ ವಾಪಸಾದರು. ಕಳೆದ ಮೂರು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂತು.