ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಕೃಷ್ಣ ಪ್ರಥಮ

Advertisement

ಮೈಸೂರು: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅಯೋಧ್ಯೆಯಲ್ಲಿ ಆಯೋಜಿಸಿದ್ದ 61ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಅಗ್ರಹಾರದ ಕೃಷ್ಣ ಪಿ. ಬಾದರಾಯಣ ಅವರು ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆ (ಪ್ರಾಚೀನ ವಿಜ್ಞಾನದಲ್ಲಿ ಪ್ರಬಂಧನ ವಿಧಿ-ವಿಷಯ)ಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗೆ ಪ್ರಶಂಸಾ ಪತ್ರದೊಂದಿಗೆ 12,000 ರೂ.ನಗದು ಬಹುಮಾನವನ್ನೂ ನೀಡಿ ಗೌರವಿಸಲಾಗಿದೆ.
ಮೈಸೂರಿನ ಉತ್ತರಾದಿ ಮಠದ ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯ ಮತ್ತು ಭಾಗ್ಯಶ್ರೀ ಅವರ ಪುತ್ರನಾದ ಈತ ತಂದೆಯ ಬಳಿಯೇ ಸಂಸ್ಕೃತ ವೇದ, ಶಾಸ್ತ್ರ ಅಧ್ಯಯನ ಮಾಡುತ್ತಿದ್ದು, ಮೈಸೂರಿಗೆ ಕೀರ್ತಿ ತಂದಿದ್ದಾನೆ. ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ 30ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆ, ಗುರುಕುಲಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ ಜೀ, ಶ್ರೀ ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ನೃತ್ಯ ಗೋಪಾಲದಾಸ ಸ್ವಾಮೀಜಿ, ರಾಮ ಜನ್ಮಭೂಮಿ ನ್ಯಾಸ ಕ್ಷೇತ್ರದ ಮಹಾಸಚಿವ ಚಂಪತ್ ರಾಯ, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ವರಖೇಡಿ ( ಮಾ. 22ರಂದು) ಬಹುಮಾನ ವಿತರಿಸಿದರು. ದೇಶದ ವಿವಿಧ ಭಾಗದ ಹಿರಿಯ ವಿದ್ವಾಂಸರು ತೀರ್ಪುಗಾರರಾಗಿ ಆಗಮಿಸಿದ್ದರು.