ಅಗ್ನಿಪಥ ಯೋಜನೆ ರದ್ದತಿಗೆ ರಾಹುಲ್ ಗಾಂಧಿ ಭರವಸೆ

Advertisement

ಅನೂಪ್‌ಗಢ: ಕೇಂದ್ರದಲ್ಲಿ ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದಲ್ಲಿ ರಕ್ಷಣಾ ಸೇವೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ರದ್ದುಪಡಿಸುವುದಾಗಿ ಮತ್ತು ಹಿಂದಿನ ಯೋಜನೆಯನ್ನು ಮರುಸ್ಥಾಪಿಸುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಜೊತೆಗೆ ರೈತರ ಸಾಲ ಮನ್ನಾ, ಅವರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜಸ್ಥಾನದ ಅನೂಪ್‌ಗಢದಲ್ಲಿ ಅವರು ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಬಾರಿಯ ಚುನಾವಣೆ ಶತಕೋಟ್ಯಾಧಿಪತಿಗಳು ಮತ್ತು ಸಾಮಾನ್ಯ ಜನರ ನಡುವೆ ನಡೆಯುತ್ತಿರುವ ಸಮರ ಎಂದು ರಾಹುಲ್, ಮೋದಿ ಅವರ ಆಳ್ವಿಕೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ಅಪಾಯವುಂಟಾಗಿದೆ ಎಂದರು. ಜಾತಿಗಣತಿಯನ್ನು ಮತ್ತೊಮ್ಮೆ ಪ್ರತಿಪಾದಿಸಿ, ದೇಶದ ಜನಸಂಖ್ಯೆಯ ಶೇಕಡಾ ೯೦ಕ್ಕಿಂತ ಹೆಚ್ಚು ಜನರನ್ನು ಲೆಕ್ಕಿಸುತ್ತಿಲ್ಲ. ವಿವಿಧ ಆಡಳಿತ ಸಂಸ್ಥೆಗಳಲ್ಲಿ ಬಡವರಿಗೆ ಪ್ರಾತಿನಿಧ್ಯವೇ ಇಲ್ಲ.
ಅವರ ಭಾಗವಹಿಸುವಿಕೆ ಶೂನ್ಯ ಅಥವಾ ಅತ್ಯಲ್ಪ ಎಂದು ಅವರು ವಿವರಿಸಿದರು. ಇದೇ ಕಾರಣಕ್ಕೆ ದೇಶದ ಸಂಪನ್ಮೂಲ, ಸಂಪತ್ತು ಹಂಚಿಕೆ ಕುರಿತು ಆರ್ಥಿಕ ಸಮೀಕ್ಷೆ ಹಾಗೂ ಜಾತಿ ಗಣತಿ ನಡೆಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ ಎಂದರು. ದೇಶದ ಅತಿ ಶ್ರೀಮಂತ ೨೨ ಉದ್ಯಮಿಗಳ ಒಟ್ಟು ಸಂಪತ್ತು ೭೦ ಕೋಟಿ ಭಾರತೀಯರ ಸಂಪತ್ತಿಗೆ ಸಮವಾಗಿದೆ ಎಂದು ವಿವರಿಸಿ, ಈ ತಾರತಮ್ಯ ನಿವಾರಣೆಗೆ ಜಾತಿ ಗಣತಿ ಮುಖ್ಯ ಎಂದರು. ಖಾಲಿ ಇರುವ ೩೦ ಲಕ್ಷ ಹುದ್ದೆಗಳ ಭರ್ತಿ, ಹಣದುಬ್ಬರ ನಿಯಂತ್ರಣ ಮುಂತಾದ ಭರವಸೆಗಳನ್ನು ಮೋದಿ ನೀಡಿದರು.