ಅಣ್ಣಾ ಕೇಳಣ್ಣ ನಾನೊಂದ ಕನಸ ಕಂಡೆ…

Advertisement

ಬೀಗರ ಊರಿಗೆ ಹೋಗಿಬಂದ ಕರಿಲಕ್ಷಂಪತಿ… ಹೋಗುವವರನ್ನು ನಿಲ್ಲಿಸಿ, ಅಯ್ಯೋ ನಾನು ವಾರಣಾಸಿಗೆ ಹೋಗಿದ್ದೆ. ಸೋದಿಮಾಮಾನ ನಾಮಿನೇಷನ್ ಮಾಡಿ, ಟಿಫಿನ್ ಮಾಡಿಕೊಂಡು ಈಗ ಬಂದೆ ಎಂದು ಹೇಳುತ್ತಿದ್ದ. ತಿಗಡೇಸಿಗೆ ಈ ವಿಷಯ ಗೊತ್ತಾಗಲಿ ಎಂದು ಆತನ ಗೆಳೆಯರ ಮುಂದೆ ಒಂದಕ್ಕೆ ಎರಡು ಸೇರಿಸಿ ಹೇಳಿದ್ದ. ಇದರಿಂದಾಗಿ ಮನಸ್ಸಿಗೆ ಒಂಥರಾ ಮಾಡಿಕೊಂಡ ತಿಗಡೇಸಿ..ನಾನೇನು ಕಮ್ಮಿ…ಅಂವ ಅವರಿಗೆ ಕ್ಲೋಸ್ ಆದರೆ ನಾನು ಇವರಿಗೆ ಹತ್ತಿರವಾಗುತ್ತೇನೆ ನೋಡಿ ಎಂದು ಗೆಳೆಯರ ಮುಂದೆ ಪ್ರಮಾಣ ಮಾಡಿದ.
ಅಂದಿನಿಂದ ಹೇಗಾದರೂ ಮಾಡಿ ಮದ್ರಾಮಣ್ಣನಿಗೆ ಹತ್ತಿರವಾಗುವ ಪ್ಲಾನ್ ಮಾಡುತ್ತಿದ್ದ. ಊರಿಗೆ ಬಂದಾಗ ಆತನ ಹಿಂದೆ ಮುಂದೆ ಸುತ್ತುವುದು ಮಾಡುತ್ತಿದ್ದ. ಸುಮ್ಮ ಸುಮ್ಮನೇ ಮಿಸ್ ಕಾಲ್ ಕೊಡುತ್ತಿದ್ದ. ಯರ‍್ಯಾರಿಗೋ ಫೋನು ಮಾಡಿ ನಾನು ಅವರಿಗೆ ಹತ್ತಿರವಾಗಬೇಕೆಂದು ಮಾಡಿದ್ದೇನೆ ಏನಾದರೂ ಐಡಿಯಾ ಕೊಡಿ ಎಂದು ಕೇಳುತ್ತಿದ್ದ. ತಳವಾರ್ಕಂಟಿ…ನೋಡೂ ಇಂಥ ದಿನ ಇಂಥಲ್ಲಿ ಸಮಾವೇಶ ಇದೆ. ಅವರು ಬರುತ್ತಾರೆ. ಜನರನ್ನು ದೂಡಿಕೊಂಡು ಹತ್ತಿರ ಹೋಗು ಎಂದು ಸಲಹೆ ಕೊಟ್ಟ. ವಾವ್ ಎಂದ ತಿಗಡೇಸಿ ಅದೇ ರೀತಿ ಮಾಡಲು ಹೋಗಿ ಪೊಲೀಸರಿಂದ ಲಾಠಿ ಏಟು ತಿಂದು ಬಂದಿದ್ದ. ಆದರೂ ಹತ್ತಿರವಾಗುವ ಆಸೆ ಮಾತ್ರ ಹೋಗಿರಲಿಲ್ಲ. ಅವತ್ತೊಂದು ದಿನ ಫೋನ್ ಮಾಡಿ..ಸಾಹೇಬರೇ ಹೇಗಿದ್ದೀರಿ ಎಂದು ಕೇಳಿದ…ಯಾವನ್ಲಾ ಇವ ಎಂದು ಪಕ್ಕದವರ ಕೈಗೆ ಫೋನ್ ಕೊಟ್ಟರು. ಅವರು ಕರೆ ಕಟ್ ಮಾಡಿದರು. ಅದಾದ ನಂತರ ಮತ್ತೆ ಅವರ ಮನೆ ಹತ್ತಿರ ಹೋಗಿಬಂದ ಆಗಲೂ ಸಾಧ್ಯವಾಗಲಿಲ್ಲ. ಆ ಕಡೆ ಕರಿಲಕ್ಷಂಪತಿ ಮುಸಿಮುಸಿ ನಗುತ್ತಿದ್ದ. ಕೊನೆಗೆ ನಾಟಕದ ಮಾಸ್ತರ ಕರಿಯಪ್ಪನ ಹತ್ತಿರ ಹೋಗಿ ಆತನಿಗೆ ಕಟ್ಟು ಬೀಡಿ ಕೊಡಿಸಿ ನೋಡು ಹಿಂಗಿಂಗೆ ಆಗಿದೆ ಅಂದಾಗ… ಅದಕ್ಕೇಕೆ ಚಿಂತೆ ಮಾಡುತ್ತಿ…ಹೀಗೆ ಮಾಡು ಗ್ಯಾರಂಟಿ ನಿನಗೆ ಹತ್ತಿರವಾಗುತ್ತಾರೆ ಎಂದು ಹೇಳಿದ. ಖುಷಿಯಾದ ತಿಗಡೇಸಿ.. ಕರಿಯಪ್ಪ ಹೇಳಿದ ಹಾಗೆ
ಅಣ್ಣಾ ಕೇಳಪ್ಪ ನಾನೊಂದು ಕನಸ ಕಂಡೆ…
ಅವರಿಗೆ ಕೊಡಿಯಪ್ಪ ಕರಿಯ ಬಂಡೆ…
ಎಂದು ಹಾಡಿ ವಿಡಿಯೋ ಮಾಡಿ ಅದನ್ನು ಎಡಿಟ್ ಮಾಡಿಸಿ ಮದ್ರಾಮಣ್ಣನಿಗೆ ಕಳುಹಿಸಿದ. ಮರುದಿನವೇ ಪೊಲೀಸರು ಬಂದು ತಿಗಡೇಸಿಯನ್ನು ಹಾಕಿಕೊಂಡು ಹೋದರು. ಯಾಕೆಂದರೆ ವಿಡಿಯೋ ಎಡಿಟ್ ಮಾಡಿದವನು ಕರಿಲಕ್ಷಂಪತಿ ಅಳಿಯ. ಎಲ್ಲವೂ ಉಲ್ಟಾ ಮಾಡಿ ಕೊಟ್ಟಿದ್ದರು.