ಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿ ಜಾರಿ

Advertisement

ಭೂತರಾಮನಹಟ್ಟಿ (ಯಮಕನಮರಡಿ): ‘ಚೋರಿ ಸೆ ಬನಾಯಾ ಗಯಾ ಸರಕಾರ ಚೋರಿ ಹೀ ಕರೆಂಗೆ’ ಶಾಸಕರನ್ನು ಹಣದ ಆಮಿಷದಿಂದ ಕಳ್ಳತನ ಮಾಡಿ ರಚನೆಯಾದ ಸರಕಾರ ಕಳ್ಳತನ ಮಾಡಲಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮೂರು ವರ್ಷದಿಂದ ಬಿಜೆಪಿ ಸರಕಾರ ರಾಜ್ಯವನ್ನು ಲೂಟಿ ಮಾಡಿದೆ. ಮತ್ತೆ ಇಂತಹ ಖರೀದಿಗೆ ಅವಕಾಶ ನೀಡದಂತೆ ರಾಜ್ಯದ ಜನತೆ ಕಾಂಗ್ರೆಸ್‌ಗೆ ೧೫೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ರಾಜ್ಯದ ಜನತೆಗೆ ಕರೆ ನೀಡಿದರು.
ಯಮನಕನಮರಡಿ ಕ್ಷೇತ್ರದ ಭೂತರಾಮನಹಟ್ಟಿ ಗ್ರಾಮದ ಹೊರವಲಯದಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದರೆ ಬಿಜೆಪಿ ಸರಕಾರ ಮೂರು ವರ್ಷಗಳ ಅವಧಿಯಲ್ಲಿ ಮಾಡಿದ ಲೂಟಿಯ ಹಣವನ್ನು ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳ ಮೂಲಕ ರಾಜ್ಯದ ಜನತೆಗೆ ಮರಳಿಸಲಾಗುವುದು ಎಂದು ಭರಸವೆ ನೀಡಿದರು.
ತಮ್ಮ ಭಾಷಣದ ಉದ್ದಕ್ಕೂ ರಾಜ್ಯ ಸರಕಾರದ ಭಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರಕಾರ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಲೂಟಿ ಮಾಡಿದೆ. ಇದು ದೇಶದ ಅತಿ ಭ್ರಷ್ಟ ಸರಕಾರ ಎಂಬ ಖ್ಯಾತಿಗೆ ಒಳಗಾಗಿದೆ. ೪೦ ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪತ್ರ ಬರೆದರೂ ಪ್ರಧಾನಿಯಿಂದ ಉತ್ತರ ಬರಲಿಲ್ಲ. ಪಿಎಸ್‌ಐ ನೇಮಕಾತಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೀಗೆ ಪ್ರತಿಯೊಂದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರಧಾನಿ ರಾಜ್ಯಕ್ಕೆ ಬಂದು ಭಾಷಣ ಮಾಡಿ ಹೋಗ್ತಿದ್ದಾರೆ. ಒಂದು ಬಾರಿಯೂ ರಾಜ್ಯ ಸಕಾರದ ಭ್ರಷ್ಟಾಚಾರದ ಬಗ್ಗೆ ಚಕಾರ ಎತ್ತಿಲ್ಲ. ೩ ವರ್ಷದಲ್ಲಿ ರಾಜ್ಯ ಸರಕಾರ ನಡೆಸಿದ ಭ್ರಷ್ಟಾಚಾರ ಕುರಿತಾಗಿ ಏನು ಕ್ರಮ ಕೈಗೊಂಡ್ರಿ, ಎಷ್ಟು ಜನರನ್ನು ಜೈಲಿಗೆ ಹಾಕಿದ್ದಿರಿ ಎಂದು ನಾನು ಪ್ರಧಾನಿಯನ್ನು ಪ್ರಶ್ನೆ ಮಾಡಿದ್ದೇನೆ. ಈವರೆಗೆ ಉತ್ತರ ಬಂದಿಲ್ಲ. ಬದಲಾಗಿ ಭಯೋತ್ಪಾದನೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿ ವಿಷಯಾಂತರ ಮಾಡುತ್ತಿದ್ದಾರೆ. ೪೦ ಸಂಖ್ಯೆ ಬಿಜೆಪಿಯವರಿಗೆ ಅತ್ಯಂತ ಇಷ್ಟದ ಸಂಖ್ಯೆಯಾಗಿದೆ. ೪೦ ಪರ್ಸೆಂಟ್ ಕಮಿಷನ್ ಸರಕಾರವನ್ನು ೪೦ ಸೀಟುಗಳಿಗೆ ಸೀಮಿತಗೊಳಿಸುವ ಮೂಲಕ ರಾಜ್ಯದ ಜನತೆ ಪಾಠ ಕಲಿಸಬೇಕೆಂದು ಕರೆ ನೀಡಿದರು.
ಪ್ರಧಾನ ಮಂತ್ರಿಗಳು ಪ್ರತಿವರ್ಷ ೨ ಕೋಟಿ ಜನರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದು ೪೦ ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗದ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ. ಸಿಲಿಂಡರ್ ದರ, ಪೆಟ್ರೋಲ್ ದರ ಎರಡು ಪಟ್ಟು ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆಯೂ ದುಬಾರಿಯಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಮುಂತಾದ ಕ್ರಮಗಳ ಮೂಲಕ ದೇಶದ ಜನಸಾಮಾನ್ಯರ ಬದಕು ನರಕ ಮಾಡಿದ್ದೀರಿ. ಇದರ ಬಗ್ಗೆ ಪ್ರಶ್ನೆ ಮಾಡಿದರೆ ಬೇರೆ ವಿಷಯ ಕೆದಕಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ರಾಜ್ಯವನ್ನು ಸುತ್ತು ಹಾಕಿದಾಗ ಕಾಂಗ್ರೆಸ್ ೧೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವುದು ನಿಶ್ಚಿತವೆನಿಸಿದೆ. ಮುಂಬರುವ ಕಾಂಗ್ರೆಸ್ ಸರಕಾರ ಬಡವರ, ನಿರ್ಗತಿಕರ, ಕೃಷಿಕರ ಪರವಾಗಿ ಕೆಲಸ ಮಾಡುವ ಸರಕಾರವಾಗಿಲಿದೆ ಹೊರತು ಭ್ರಷ್ಟ ಶ್ರೀಮಂತರ ಪರ ಸರಕಾರ ಆಗಿರುವುದಿಲ್ಲ ಎಂಬ ಆಶ್ವಾಸನೆ ಕೊಡುತ್ತೇನೆ ಎಂದು ಹೇಳಿದರು.