ಅನುಭವಗಳು

ಗುರುರಾಜ ಕರಜಗಿ
Advertisement

ನಮ್ಮ ವಿದ್ಯಾರ್ಥಿ ಮಂಡಳಿಯನ್ನು ಕಟ್ಟಿಕೊಂಡು ಜೋಹಾನ್ಸ ಬರ್ಗ್ದಿಂದ ಜಾರ್ಜ ಪಟ್ಟಣಕ್ಕೆ ಬಂದೆವು. ಅದೊಂದು ವಿಪರೀತ ಗಾಳಿಯ ಪ್ರದೇಶ. ವಿಮಾನದಿಂದ ಕೆಳಗೆ ಇಳಿದು ಬಂದೊಡನೆ ಗಾಳಿಗೆ ಹಾರಿ ಹೋಗುತ್ತೇವೋ ಎಂಬಷ್ಟು ವೇಗದ ಗಾಳಿ. ಅಲ್ಲಿ ನಾವು ಉಳಿದುಕೊಳ್ಳುವ ವ್ಯವಸ್ಥೆ ತುಂಬ ಚೆನ್ನಾಗಿತ್ತು. ನಾಲ್ಕು ಮಕ್ಕಳಿಗೆ ಒಂದು ಸುಸಜ್ಜಿತವಾದ ಮನೆಯನ್ನೇ ಕೊಟ್ಟಿದ್ದರು. ಮರುದಿನ ಅಲ್ಲಿ ಹತ್ತಿರವಿದ್ದ ಆಸ್ಟ್ರಿಚ್ ಪಕ್ಷಿಧಾಮಕ್ಕೆ ಹೋದೆವು. ಆಸ್ಟ್ರಿಚ್‌ನ್ನು ಕೇವಲ ಚಿತ್ರದಲ್ಲಿ ಕಂಡಿದ್ದ ನಮಗೆಲ್ಲ ಅವುಗಳನ್ನು ಕಂಡು ಆಶ್ಚರ್ಯವಾಯಿತು. ಅವು ಸುಮಾರು ನಾಲ್ಕೈದು ಅಡಿ ಎತ್ತರದ ಪಕ್ಷಿಗಳು. ಕೆಲವೊಂದು ಆರು ಅಡಿಗಳಷ್ಟು ಎತ್ತರವಾದವೂ ಇದ್ದವು. ಅವುಗಳ ನಡೆಯುವ ಗತ್ತು, ನೀಳವಾದ ಕತ್ತು ಆಕರ್ಷಕವಾಗಿದ್ದವು. ನಮ್ಮನ್ನು ಫಾರ್ಮ ಒಳಗಡೆಗೆ ಬಿಡುವ ಮೊದಲು ನಮಗೆ ಅವುಗಳ ಬಗ್ಗೆ ತಿಳಿ ಹೇಳಿ ತುಂಬ ಜಾಗರೂಕರಾಗಿರುವಂತೆ ತಾಕೀತು ಮಾಡಿದರು. ನೋಡುವುದಕ್ಕೆ ತುಂಬ ಮುಗ್ಧವಾಗಿರುವಂತೆ ಕಾಣುವ ಆ ಪಕ್ಷಿಗಳು ಬಹಳ ಉಗ್ರವೂ ಆಗಬಹುದು. ಅವುಗಳಿಗೆ ತಿನ್ನಲು ಕೊಡಹೋದರೆ ಅವು ನಿಮ್ಮ ಬೆರಳುಗಳನ್ನೇ ಕಚ್ಚಬಹುದು. ತುಂಬ ಹತ್ತಿರಕ್ಕೆ ಬಂದರೆ ಅವು ಫಟ್ಟೆಂದು ನಿಮ್ಮ ಕಣ್ಣುಗಳನ್ನೇ ಕುಕ್ಕಿಬಿಡಬಹುದು. ಅಂತಹ ಅನೇಕ ಘಟನೆಗಳು ಅಲ್ಲಿ ಆಗಿದ್ದವಂತೆ. ಈ ಪಕ್ಷಿಗಳ ಮೊಟ್ಟೆಗಳು ತುಂಬ ದೊಡ್ಡ ಗಾತ್ರದವು. ಅವು ನಮ್ಮ ತುಂಬ ಬೆಳೆದ ತೆಂಗಿನಕಾಯಿಯಷ್ಟು ದೊಡ್ಡವು. ಫಾರ್ಮನ ಮೇಲ್ವಿಚಾರಕನೊಬ್ಬ ಬಂದು ಎಂಟು ಮೊಟ್ಟೆಗಳನ್ನು ನೆಲದ ಮೇಲೆ ಮರಳಿನ ಹಾಸಿನ ಮೇಲೆ ಜೋಡಿಸಿಟ್ಟು, ಅವುಗಳ ಮೇಲೆ ಒಂದು ಮರದ ಹಲಗೆಯನ್ನಿಟ್ಟ. ನಮ್ಮಲ್ಲಿ ಕೆಲವರಿಗೆ ಆ ಹಲಗೆಯ ಮೇಲೆ ನಿಲ್ಲಲು ಹೇಳಿದ. ಎಲ್ಲರಿಗೂ ಆತಂಕ. ಆ ಮೊಟ್ಟೆಗಳು ಒಡೆದು ಹೋಗಬಹುದು ಎಂಬ ನಂಬಿಕೆ. ಆಗ ಆತನೇ ಅದರ ಮೇಲೆ ನಿಂತು ತೋರಿಸಿದ. ಮೊಟ್ಟೆಗಳಿಗೆ ಏನೂ ಆಗಿರಲಿಲ್ಲ. ಮೊಟ್ಟೆಗಳ, ಚಿಪ್ಪು ಬಲುಗಟ್ಟಿ. ಅಂತೆಯೇ ಮರುಭೂಮಿಯಲ್ಲೂ ಒಳಗಿನ ಮರಿ ಭದ್ರ.


ಈ ಆಸ್ಟ್ರಿಚ್ ಪಕ್ಷಿಗಳು ಓಡುವುದು ಅಸಾಧ್ಯ ವೇಗದಲ್ಲಿ. ಒಬ್ಬ ಮೇಲ್ವಿಚಾರಕ ಒಂದು ಸ್ಕೂಟರ್ ಮೇಲೆ ಕುಳಿತು ಭರ್ ಎಂದು ಓಡಿಸಿದ. ಅವನನ್ನು ಒಂದು ಆಸ್ಟ್ರಿಚ್ ಪಕ್ಷಿ ಬೆನ್ನತ್ತಿತು. ಕ್ಷಣಮಾತ್ರದಲ್ಲಿ ಸ್ಕೂಟರ್‌ನ್ನು ಹಿಂದೆ ಹಾಕಿ ಮುಂದೆ ಓಡಿತು. ಆ ಪಕ್ಷಿ ತಾಸಿಗೆ ಅರವತ್ತು ಕಿಲೋ ಮೀಟರ್ ವೇಗದಲ್ಲಿ ಓಡುತ್ತದಂತೆ. ಅದು ತುಂಬ ಗಟ್ಟಿಯಾದ ಪಕ್ಷಿ. ಒಬ್ಬ ಬಲಿಷ್ಠವಾದ ತರುಣನನ್ನು ಬೆನ್ನ ಮೇಲೆ ಅನಾಯಾಸವಾಗಿ ಹೊತ್ತುಕೊಂಡು ಓಡುತ್ತದೆ. ಮೇಲೆ ಕುಳಿತವರು ಗಟ್ಟಿಯಾಗಿ ಅದರ ರೆಕ್ಕೆಗಳನ್ನು ಹಿಡಿದುಕೊಂಡಿರಬೇಕು. ಇಲ್ಲದಿದ್ದರೆ ಅದು ಹಾರುತ್ತ, ಕುಪ್ಪಳಿಸುತ್ತ ಅವರನ್ನು ಕೆಡವಿಬಿಡುತ್ತದೆ. ಅಷ್ಟೇ ಅಲ್ಲ, ಅದರ ಪಾದದಲ್ಲಿ ಮುಂದೆ ನಾಲ್ಕು ಬೆರಳುಗಳು ಮತ್ತು ಹಿಂದೆ ಒಂದು ಬೆರಳು. ಹಿಂದಿನ ಬೆರಳು ಚಾಕುವಿನಿಂತೆ ಚಾಚಿಕೊಂಡಿರುತ್ತದೆ. ಅದು ಠಕ್ಕೆಂದು ಒದೆದರೆ ಆ ಹಿಂದಿನ ಬೆರಳು ಖಡ್ಗದಂತೆ ಚಲಿಸಿ ಚರ್ಮವನ್ನು ಹರಿದುಬಿಡುತ್ತದೆ. ಹಾಗಾದರೆ ಅದನ್ನು ನಿಗ್ರಹಿಸುವುದು ಹೇಗೆ ಎನ್ನುವುದು ನಮ್ಮ ಪ್ರಶ್ನೆಯಾಗಿತ್ತು. ಅಲ್ಲಿಯ ಕಾರ್ಯಕರ್ತರು ಒಂದು ತಮಾಷೆಯನ್ನು ತೋರಿಸಿದರು. ಅವರ ಬಳಿ ಒಂದು ಉದ್ದವಾದ ಮತ್ತು ಪಕ್ಷಿಯ ಮುಖವನ್ನು ಮುಚ್ಚುವಷ್ಟು ಅಳತೆಯ ಟೊಪ್ಪಿಗೆಯಿತ್ತು. ಆತ ಪಕ್ಷಿಯ ನೀಳವಾದ ಕತ್ತನ್ನು ಹಿಡಿದು ಕ್ಷಣಮಾತ್ರದಲ್ಲಿ ಅದರ ತಲೆಗೆ ಟೊಪ್ಪಿಗೆಯನ್ನು ಹಾಕಿಬಿಟ್ಟ. ಅದರ ಮುಖ ಪೂರ್ತಿ ಮುಚ್ಚಿ ಹೋಯಿತು. ಅದಕ್ಕೆ ಈಗ ಕಣ್ಣೇ ಕಾಣದು. ಆಶ್ಚರ್ಯ! ಪಕ್ಷಿ ಅಲುಗಾಡದೇ ನಿಂತುಬಿಟ್ಟಿತು. ಈಗ ಅದು ಹೇಳಿದಂತೆ ಕೇಳುವ ವಿಧೇಯ ಪಕ್ಷಿ. ನಿರಾತಂಕವಾಗಿ ಅದರ ಬೆನ್ನೇರಿ ಕುಳಿತುಕೊಳ್ಳಬಹುದು. ರೆಕ್ಕೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಪಕ್ಕೆಯನ್ನು ತಿವಿದರೆ ಓಡತೊಡಗುತ್ತದೆ. ಅದರ ಕುತ್ತಿಗೆಯೇ ಸ್ಟಿಯರಿಂಗ್ ಚಕ್ರ. ಕತ್ತನ್ನು ಎಡಗಡೆಗೆ ತಳ್ಳಿದರೆ ಪಕ್ಷಿ ಎಡಗಡೆಗೆ ತಿರುಗುತ್ತದೆ, ಬಲಕ್ಕೆ ತಳ್ಳಿದರೆ ಬಲಕ್ಕೆ. ಹಿಂದೆ ಎಳೆದರೆ ನಿಲ್ಲುತ್ತದೆ. ಆದ್ದರಿಂದ ಅದರ ಕುತ್ತಿಗೆಯೇ ವೇಗವರ್ಧಕವೂ, ತಡೆಯೂ ಹಾಗೂ ಮಾರ್ಗದರ್ಶಕವೂ ಆಗುತ್ತದೆ. ಮಕ್ಕಳಿಗೆ ಬಹಳ ಸಂತೋಷವಾಯಿತು. ಎಲ್ಲರೂ ಆಸ್ಟ್ರಿಚ್ ಪಕ್ಷಿಯ ಸವಾರಿ ಮಾಡಿದರು.
ಅದೇ ನಗರದ ಹತ್ತಿರ ಒಂದು ಮೊಸಳೆಗಳ ಪಾರ್ಕ ಇದೆ. ಅದನ್ನು ನೋಡಲು ಹೋದೆವು. ಅದೆಷ್ಟು ಮೊಸಳೆಗಳು! ಅದೆಷ್ಟು ಬಗೆಯ ಮೊಸಳೆಗಳು. ಮೊಸಳೆಗಳಲ್ಲಿ ಅಷ್ಟೊಂದು ಪ್ರಕಾರಗಳಿವೆಯೆಂದು ತಿಳಿದಿರಲಿಲ್ಲ. ಅಲ್ಲಲ್ಲಿ ಸಣ್ಣ ಸಣ್ಣ ಸರೋವರಗಳು. ಪ್ರತಿ ಸರೋವರದಲ್ಲೂ ನೂರಾರು ಮೊಸಳೆಗಳು. ಎಲ್ಲೆಡೆಯೂ ಸೂಚನಾ ಫಲಕಗಳನ್ನು ಹಾಕಿದ್ದರು. ಒಕ್ಕಣೆ ಸ್ಟಷ್ಟವಾಗಿತ್ತು. ದಯವಿಟ್ಟು ಯಾರೂ ಕೊಳದಲ್ಲಿ ನಾಣ್ಯಗಳನ್ನು ತೂರಬೇಡಿ. ಅವು ಪ್ರಾಣಿಗಳ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಕ್ಕೆ ಅಪಾಯ ತರುತ್ತವೆ. ಆದರೆ ಪ್ರತಿ ಕೊಳದಲ್ಲೂ, ಬದಿಯಲ್ಲೂ ಸಾವಿರಾರು ನಾಣ್ಯಗಳು. ನನಗೆ ಬಹಳ ಬೇಸರವಾಯಿತು. ಅಲ್ಲಿ ಬರುವ ಬಹುತೇಕರು ಶಿಕ್ಷಿತರು. ಅದು ಏಕೆ ಹಾಗೆ ನಡೆದುಕೊಳ್ಳುತ್ತಾರೆ? ಬೇಡ ಎಂದಿದ್ದನ್ನೇ ಮಾಡುವ ಹಟ ಏಕೆ ಎಂಬುದು ತಿಳಿಯುವುದಿಲ್ಲ. ಪ್ರಾಣಿ ಸಂಗ್ರಹಾಲಯಗಳಲ್ಲಿ ಕೋತಿಗಳಿಗೆ ಆಹಾರ ಕೊಡಬೇಡಿ ಎಂದರೆ ಮುದ್ದಾಂ ಹಾಕುವವರಿರುತ್ತಾರೆ. ಹಿಂಸ್ರಪ್ರಾಣಿಗಳ ಆವರಣದ ಹತ್ತಿರ ಹೋಗಬೇಡಿ ಎಂದರೆ ಹತ್ತಿರಹೋಗಿ, ಮುಟ್ಟಲು ನೋಡಿ ಕೈಯನ್ನೋ, ಜೀವವನ್ನೋ ಕಳೆದುಕೊಂಡವರಿದ್ದಾರೆ. ಕೋತಿಗಳನ್ನೇ ಅಣಕಿಸುವವರನ್ನು ಕಂಡಾಗ ಹಿಂದೆ ಒಬ್ಬ ಪ್ರಾಣಿಪ್ರೇಮಿ ಹೇಳಿದ ಮಾತು ನೆನಪಾಗುತ್ತದೆ. “Zoo is a Place for the animals to study human behavior”. ‘ಮನುಷ್ಯರ ನಡವಳಿಕೆಯನ್ನು ಗಮನಿಸಲು ಪ್ರಾಣಿಗಳಿಗಿರುವ ಸ್ಥಳ ಪ್ರಾಣಿ ಸಂಗ್ರಹಾಲಯ’.
ಮುಂದೆ ಕೇಪಟೌನ್‌ಗೆ ಬಂದು, ಪರ್ವತದ ಮೇಲಿದ್ದ ‘ಟೇಬಲ್ ಮೌಂಟ್’ ನೋಡಿ, ಸಮುದ್ರ ತೀರದಲ್ಲಿ ನಿಂತು ದೊಡ್ಡ ದೊಡ್ಡ ವ್ಹೇಲ್ ಮೀನುಗಳು ಹಾರುವುದನ್ನು ಕಂಡು, ನಂತರ ಸಮುದ್ರತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಸೀಲ್ ಪ್ರಾಣಿಗಳ ವಸಾಹತುವನ್ನು ನೋಡಿ ಬೆರಗಾದರು ಮಕ್ಕಳು. ಮರುದಿನ ಅಲ್ಲಿಂದ ಮರಳಿ ಭಾರತಕ್ಕೆ ಹೊರಡಲು ಸಜ್ಜಾದೆವು.
ನನಗೆ ಸುಭಾಸ್‌ನ ಕಷ್ಟ ನೋಡಲಾಗುತ್ತಿರಲಿಲ್ಲ. ದಕ್ಷಿಣ ಆಫ್ರಿಕೆಗೆ ಬಂದ ದಿನವೇ ತನ್ನ ಸೂಟಕೇಸ್‌ನ್ನು ಕಳೆದುಕೊಂಡಿದ್ದ ಆತ ತನಗೆ ಕೊಡಿಸಿದ್ದ ಒಂದೆರಡು ಬಟ್ಟೆಗಳ ಜೊತೆಗೆ ಸ್ನೇಹಿತರು ಕೊಟ್ಟ ಬಟ್ಟೆಗಳನ್ನು ಹಾಕಿಕೊಂಡು ಇದ್ದ. ನಾವು ಏರ್‌ಪೋರ್ಟಿಗೆ ಸುಮಾರು ನಾಲ್ಕು ತಾಸು ಮೊದಲೇ ಬಂದೆವು. ಅಷ್ಟೊಂದು ಮಕ್ಕಳ ವೀಸಾ ಪರೀಕ್ಷೆಯಾಗಿ, ಚೆಕ್ ಇನ್ ಆಗುವುದಕ್ಕೆ ಸಮಯ ಬೇಕಲ್ಲ. ವಿಮಾನ ನಿಲ್ದಾಣದಲ್ಲಿ ನನಗೆ ಎರಡು-ಮೂರು ತಾಸು ಸಮಯವಿತ್ತು. ಆಗ ನಾನು ಯೋಚಿಸಿದೆ. ಜೋಹಾನ್ಸ್‌ಬರ್ಗದಲ್ಲಿ ಸುಭಾಸ್‌ನ ಸೂಟ್‌ಕೇಸ್ ಬರದಿದ್ದಾಗ ನಾನು ತಕರಾರು ಮಾಡಿದಾಗ ಅಧಿಕಾರಿಯೊಬ್ಬ, ಅದೇ ಸಮಯಕ್ಕೆ ಒಂದು ವಿಮಾನ ಕೇಪ್‌ಟೌನ್‌ಗೆ ಹೋಗಿದ್ದು ಮತ್ತು ಅದರಲ್ಲಿ ಬ್ಯಾಗ್ ಹೋಗಿರಬಹುದೇ ಎಂಬ ಸಂದೇಹ ವ್ಯಕ್ತಪಡಿಸಿದ್ದ. ಏನಾದರಾಗಲಿ, ನೋಡಿಬಿಡೋಣ ಎಂದು ವಿಮಾನ ನಿಲ್ದಾಣವನ್ನು ಸುತ್ತುತ್ತ ಇಲ್ಲಿ ಕಳೆದುಹೋದ ವಸ್ತುಗಳ ವಿಭಾಗ ಎಲ್ಲಿದೆ ಎಂದು ಕೇಳಿದೆ. ಒಬ್ಬ ಅಧಿಕಾರಿ ಬೆರಳು ಮಾಡಿ ಒಂದು ಜಾಗೆಯನ್ನು ತೋರಿಸಿದ. ನಾನು ಅಲ್ಲಿಗೆ ಹೋದೆ. ಅದೊಂದು ದೊಡ್ಡ ಕೋಣೆ. ಅಲ್ಲಿ ಒಳಗೆ ಅನೇಕ ಹಲಗೆಗಳ ಮೇಲೆ ಯಾರೋ ಕಳೆದುಕೊಂಡ, ಮರೆತುಹೋದ ವಸ್ತುಗಳನ್ನು ಜೋಡಿಸಿ ಇಟ್ಟಿದ್ದಾರೆ. ಅಲ್ಲಿಬ್ಬರು ಭಾರೀ ಗಾತ್ರದ ಕಪ್ಪು ಅಧಿಕಾರಿಗಳು ಕುಳಿತಿದ್ದರು. ಅದೇ ಸಮಯಕ್ಕೆ ಇಬ್ಬರು ಗಂಡಸರು, ಇಬ್ಬರು ಹೆಂಗಸರು ಅಲ್ಲಿಗೆ ಬಂದು ತಾವು ಕಳೆದುಕೊಂಡ ಬ್ಯಾಗ್ ಕೇಳುತ್ತಿದ್ದರು. ಅದು ಏನಾಯಿತೋ ತಿಳಿಯದು, ಅಧಿಕಾರಿಗೆ ಕೋಪ ಬಂದು ಒಬ್ಬ ಮನುಷ್ಯನನ್ನು ಹೊಡೆಯಲು ಮುಂದಾದ. ಈಗ ನಾಲ್ಕು ಜನ ಬಂದವರು ಕಿರಿಚಾಡತೊಡಗಿದರು. ಇನ್ನೊಬ್ಬ ಅಧಿಕಾರಿ ತನ್ನ ಜೊತೆಗಾರನನ್ನು ಸಮರ್ಥಿಸಿಕೊಂಡು ಹೋರಾಟಕ್ಕೆ ಇಳಿದ. ನಾನು ಅವರ ಜಗಳವನ್ನು ನೋಡದೆ ಒಳಗಿದ್ದ ಸೂಟ್‌ಕೇಸ್‌ಗಳನ್ನು ನೋಡುತ್ತಿದ್ದೆ. ಅರೆ! ಅಲ್ಲಿತ್ತು ಭಾರತದ ತ್ರಿವರ್ಣವನ್ನು ಅಂಟಿಸಿಕೊಂಡಿದ್ದ ಸುಭಾಸ್‌ನ ಸೂಟಕೇಸ್! ಅವರು ಕೇಳಿದರೆ ಕೊಟ್ಟು ಬಿಡುತ್ತಾರೆಯೆ? ಅದಕ್ಕೆ ನಾನು ಜೋಹಾನ್ಸ್ ಬರ್ಗದಲ್ಲಿ ಬ್ಯಾಗ್ ಕಳೆದ ಬಗ್ಗೆ ನೀಡಿದ ದೂರು, ಅದಕ್ಕೆ ಅವರ ಉತ್ತರ, ಇವನ್ನೆಲ್ಲ ತಂದು, ಬ್ಯಾಗನ್ನು ತೆಗೆಯಿಸಿ, ಅದು ಸುಹಾಸನದೇ ಎಂದು ಖಾತ್ರಿಯಾದ ಮೇಲೆ ಅದನ್ನು ಕೊಡಬೇಕು. ಇವರ ಹೋರಾಟ ಮುಗಿದು, ಅದೆಲ್ಲ ಪ್ರಕ್ರಿಯೆಯಾಗಬೇಕಾದರೆ ನಮಗೆ ವಿಮಾನ ತಪ್ಪುತ್ತಿತ್ತು. ಅವರ ಜಗಳ ಕಾವೇರಿತ್ತು. ನಾನು ಸ್ವಲ್ಪ ಧ್ವನಿ ಏರಿಸಿ, “ರೀ ಸ್ವಾಮೀ, ನೀವು ನಂತರ ಜಗಳವಾಡಿ. ನಮ್ಮ ಸೂಟಕೇಸ್ ಕೊಟ್ಟುಬಿಡಿ” ಎಂದೆ. ಒಬ್ಬ ಅಧಿಕಾರಿ, “ಯಾವುದು ನಿಮ್ಮ ಸೂಟ್ ಕೇಸ್?” ಎಂದ. “ಆಗಲೇ ಹೇಳಿದೆನಲ್ಲಪ್ಪ, ಆ ತ್ರಿವರ್ಣದ ಚಿತ್ರ ಇರುವುದು ನಮ್ಮ ಬ್ಯಾಗ್, ನಮ್ಮ ಹುಡುಗನದು. ನಾನೇ ಪ್ರಿನ್ಸಿಪಾಲ್” ಎಂದೆ. ಅವನಿಗೆ ಪ್ರಿನ್ಸಿಪಾಲ್ ಎಂದರೆ ಗೌರವವೋ ಅಥವಾ ಈ ಜಗಳದಲ್ಲಿ ಒಂದಾದರೂ ಸಮಸ್ಯೆ ಪರಿಹಾರವಾಗಿ ಹೋಗಲಿ ಎಂದುಕೊಂಡನೋ, ಸರಸರನೇ ಹೋಗಿ ಸೂಟಕೇಸ್‌ನ್ನು ತಂದು ನನ್ನ ಮುಂದೆ ಇಕ್ಕಿ “ತೆಗೆದುಕೊಂಡು ಹೋಗಿ” ಎಂದ. ಮರುಮಾತನಾಡದೆ ಬ್ಯಾಗ್ ಎತ್ತಿಕೊಂಡು ಬಂದಬಿಟ್ಟೆ. ಸುಹಾಸ್‌ನಿಗೆ ದಕ್ಷಿಣ ಆಫ್ರಿಕಾ ನೋಡಿದ್ದಕ್ಕಿಂತ ಹೆಚ್ಚಿನ ಸಂತೋಷವಾಯಿತು. ಪಾಪ! ಭಾರತದಿಂದ ಸೂಟ್‌ಕೇಸ್‌ನ್ನು ಹೇಗೆ ತಂದಿದ್ದನೋ ಒಮ್ಮೆಯೂ ತೆರೆಯದೆ ಮರಳಿ ಹಾಗೆಯೇ ತಂದಿದ್ದ ಸುಹಾಸ್. ಪ್ರತಿಯೊಂದು ಘಟನೆಯೂ ಒಂದು ಅನುಭವ. ಪ್ರತಿಯೊಂದು ಅನುಭವ ಬದುಕನ್ನು ಗಟ್ಟಿ ಮಾಡುತ್ತದೆ. ಮುಂದಾಗುವ ಘಟನೆಗಳನ್ನು ಧೈರ್ಯದಿಂದ ಎದುರಿಸುವಂತೆ ಮಾಡುತ್ತದೆ.