ಅನುಮತಿ ಸಿಗದಿದ್ದರೂ ಮೇಳಾವ್, ಎಂಇಎಸ್ ಭಂಡತನದ ನಿರ್ಧಾರ

Advertisement

ಬೆಳಗಾವಿ: ಪೊಲೀಸರ ಅನುಮತಿ ಇಲ್ಲದೇ ಗಡಿನಾಡ ಬೆಳಗಾವಿಯಲ್ಲಿ ಮಹಾ ಮೇಳಾವ್ ನಡೆಸುವ ಭಂಡತನದ ನಿರ್ಧಾರವನ್ನು ನಾಡದ್ರೋಹಿ ಎಂಇಎಸ್‌ನವರು ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಡಿ.೪ರಿಂದ ಹತ್ತು ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಹೀಗಾಗಿ ಅದಕ್ಕೆ ಪರ‍್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ್ ನಡೆಸಲಿದೆ.
ಈ ಬಾರಿ ಮಹಾಮೇಳಾವಗೆ ಪೊಲೀಸ್ ಆಯುಕ್ತರು ಸ್ಪಷ್ಟವಾಗಿ ಅನುಮತಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಕಳೆದ ಸಲದಂತೆ ಈ ಸಲವೂ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದರೆ, ಭಂಡತನಕ್ಕೆ ಬಿದ್ದ ಎಂಇಎಸ್‌ನವರು ಪೊಲೀಸರ ಅನುಮತಿ ಇಲ್ಲದೇ ಮಹಾಮೇಳಾವ್ ಮಾಡೇ ತೀರುತ್ತೇವೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.
ಈ ಮಹಾವ ಮೇಳಾವ್‌ಗಾಗಿಯೇ ೧೧ ಜನರ ಕೋರ್ ಕಮಿಟಿ ರಚಿಸಲಾಗಿದೆ. ಅವರು ನಿಗದಿಪಡಿಸಿದ ಸ್ಥಳದಲ್ಲಿ ಮೇಳಾವ್ ನಡೆಯುತ್ತದೆ. ಈಗಾಗಲೇ ಮಹಾ ನಾಯಕರಿಗೆ ಆಹ್ವಾನ ಕೂಡ ನೀಡಲಾಗಿದೆ ಎಂದು ಸಮಿತಿಯವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಟಿಳಕವಾಡಿಯ ಲೇಲೇ ಮೈದಾನದಲ್ಲಿ ಎಂಇಎಸ್‌ನವರು ಮೇಳಾವ್ ನಡೆಸಲು ವೇದಿಕೆ ನಿರ್ಮಿಸಿದ್ದರು. ಆಗ ಐಪಿಎಸ್ ಅಲೋಕಕುಮಾರ ನೇತೃತ್ವದಲ್ಲಿ ಎಸಿಪಿ ನಾರಾಯಣ ಬರಮನಿ ಮುಂತಾದವರು ಆ ವೇದಿಕೆ ತೆರವುಗೊಳಿಸಿದ್ದರು. ಹೀಗಾಗಿ ಮೇಳಾವ್ ರದ್ದಾಗಿತ್ತು, ಅದು ಇತಿಹಾಸ ಕೂಡ ಸೃಷ್ಟಿಯಾಗಿತ್ತು. ಈ ಬಾರಿ ಕೂಡ ಪೊಲೀಸರು ಅದೇ ಇತಿಹಾಸ ಮುಂದುವರೆಸಿಕೊಂಡು ಹೋಗುತ್ತಾರೊ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು.