ಅಬ್ಬರಿಸಿದ ‘ಕಿಂಗ್’ ಕೊಹ್ಲಿ, ಪ್ಲೇಆಫ್ ಆಸೆ ಜೀವಂತ

Advertisement

ಹೈದರಾಬಾದ: ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ ಆರನೇ ಶತಕ ದಾಖಲಿಸಿದ್ದಲ್ಲದೇ, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಪ್ರಸಕ್ತ ಟೂರ್ನಿಯ ಅದರ ೧೩ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್) ಎದುರು ೮ ವಿಕೆಟ್‌ಗಳ ಭರ್ಜರಿ ಜಯ ತಂದಿಟ್ಟರು.
ಟೂರ್ನಿಯ ೬೫ನೇ ಪಂದ್ಯದಲ್ಲಿನ ಈ ಗೆಲುವಿನೊಂದಿಗೆ ಆರ್‌ಸಿಬಿ ೧೪ ಪಾಯಿಂಟ್ ಹಾಗೂ +೦.೧೮೦ ನೆಟ್‌ರನ್ ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು ‘ಪ್ಲೇ-ಆಫ್’ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
೬೩ ಎಸೆತಗಳಲ್ಲಿ ಒಂದು ಡಜನ್ ಬೌಂಡರಿ ಹಾಗೂ ೪ ಸಿಕ್ಸರ್‌ಗಳೊಡನೆ ಸರಿಯಾಗಿ ೧೦೦ ಓಟ ಸಿಡಿಸಿದ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್(೭೧, ೪೭ ಎಸೆತ, ೭ ಬೌಂಡರಿ, ೨ ಸಿಕ್ಸರ್) ಮೊದಲ ವಿಕೆಟ್‌ಗೆ ೧೭.೫ ಓವರ್‌ಗಳಲ್ಲಿ ೧೭೨ ಓಟ ಕೂಡಿ ಹಾಕಿ ಗೆಲುವಿಗೆ ಅಡಿಪಾಯ ಹಾಕಿ ಕೊಟ್ಟರು.
ಹನ್ನೊಂದನೇ ಓವರಿನ ಮೊದಲ ಎಸೆತದಲ್ಲಿ ಕೊಹ್ಲಿ- ಡು’ಪ್ಲೆಸಿಸ್ ಜೋಡಿ ಶತಕದ ಜೊತೆಯಾಟ ಪೂರೈಸಿತು. ಇದು ಪ್ರಸಕ್ತ ಟೂರ್ನಿಯಲ್ಲಿ ಮೂರನೇಯದು ಹಾಗೂ ಒಟ್ಟು ನಾಲ್ಕನೇಯದು. ಇದರೊಂದಿಗೆ ಡು’ಪ್ಲೆಸಿಸ್ ಸಹ ಈ ಸಲದ ಐಪಿಎಲ್‌ನಲ್ಲಿ ತಮ್ಮ ಎಂಟನೇ ಅರ್ಧ ಶತಕ ಪೂರೈಸಿದರೆ, ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಕೊಹ್ಲಿ ಸಹ ಇದರ ಬೆನ್ನ ಹಿಂದೆಯೇ ತಮ್ಮ ಈ ವರ್ಷದ ಏಳನೇ ಅರ್ಧ ಶತಕ ದಾಖಲಿಸಿದರು.
ಅಬ್ಬರದ ಆಟ ಮುಂದುವರಿಸಿ, ಎಸ್‌ಆರ್‌ಎಚ್ ಬೌಲರ್‌ಗಳನ್ನು ಬೆನ್ನತ್ತಿ ದಂಡಿಸಿದ ಕೊಹ್ಲಿ-ಡು’ಪ್ಲೆಸಿಸ್ ಜೋಡಿ ೧೫ನೇ ಓವರಿನ ಕೊನೆಯ ಎಸೆತದಲ್ಲಿ ೧೫೦ ಓಟಗಳ ಜೊತೆಯಾಟವನ್ನೂ ಮುಗಿಸಿತು.
ಕ್ಲಾಸೆನ್ ಮಿಂಚಿನ ಶತಕ
ಇದಕ್ಕೂ ಮೊದಲು ಎಸ್‌ಆರ್‌ಎಚ್ ಎಚ್ಚರಿಕೆಯಿಂದಲೇ ಆರಂಭಿಸಿತಾದರೂ, ಐದನೇ ಓವರಿನಲ್ಲಿ ದಾಳಿಗಿಳಿದ ಆಫ್ ಸ್ಪಿನ್ನರ್ ಮೈಕಲ್ ಬ್ರೇಸ್‌ವೆಲ್ ತಮ್ಮ ಮೊದಲ ಓವರಿನಲ್ಲಿಯೇ ಎದುರಾಳಿಗಳ ಇಬ್ಬರೂ ಪ್ರಾರಂಭಿಕ ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಮೊದಲ ಎಸೆತದಲ್ಲಿ ಅಭಿಷೇಕ ಶರ್ಮಾ(೧೧, ೧೪ ಎಸೆತ, ೨ ಬೌಂಡರಿ) ವಿಕೆಟ್ ಎತ್ತಿದ ಅವರು ಮೂರನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ(೧೫, ೧೨ ಎಸೆತ, ೨ ಬೌಂಡರಿ, ೧ ಸಿಕ್ಸರ್) ಅವರನ್ನೂ ‘ಬಲಿ’ ಹಾಕಿದರು.
ಆದರೆ ಎಸ್‌ಆರ್‌ಎಚ್‌ಗೆ ಆಸರೆಯಾದ ಕ್ಲಾಸೆನ್ ಎರಡು ಪ್ರಮುಖ ಪಾಲುದಾರಿಕೆಗಳಲ್ಲಿ ಪಾಲ್ಗೊಂಡು ತಂಡದ ಮೊತ್ತ ಉಬ್ಬಿಸಲು ಕಾರಣರಾದರು. ಮೊದಲು ಮೂರನೇ ವಿಕೆಟ್‌ಗೆ ನಾಯಕ ಏಡನ್ ಮಾರ್ಕ್ರಂ(೧೮, ೨೦ ಎಸೆತ) ಅವರೊಡನೆ ೫೦ ಎಸೆತಗಳಲ್ಲಿ ೭೬ ಓಟ ಕೂಡಿಹಾಕಿದ ಅವರು, ನಂತರ ನಾಲ್ಕನೇ ವಿಕೆಟ್‌ಗೆ ಹ್ಯಾರಿ ಬ್ರೂಕ್(ಔಟಾಗದೇ ೨೭, ೧೯ ಎಸೆತ, ೨ ಬೌಂಡರಿ, ೧ ಸಿಕ್ಸರ್) ಅವರೊಡನೆ ೩೬ ಎಸೆತಗಳಲ್ಲಿ ಮತ್ತೆ ೭೪ ಓಟ ಸೇರಿಸಿ ತಂಡಕ್ಕೆ ಗೌರವಯುತ ಮೊತ್ತ ತಂದಿತ್ತರು.
ಕ್ಲಾಸೆನ್ ಹತ್ತೊಂಭತ್ತನೇ ಓವರಿನ ಐದನೇ ಎಸೆತದಲ್ಲಿ ಹರ್ಷಲ್ ಪಟೇಲ್‌ಗೆ ಬೌಲ್ಡ್ ಆಗಿ ನಿರ್ಗಮಿಸಿದ ನಂತರ, ಸರದಿಯ ಕೊನೆಯ ಎಸೆತದಲ್ಲಿ ಗ್ಲೆನ್ ಫಿಲಿಪ್(೫, ೪ ಎಸೆತ, ೧ ಬೌಂಡರಿ) ಸಿರಾಜ್‌ಗೆ ಹುದ್ದರಿ ಒಪ್ಪಿಸಿದರು.
ಕೇವಲ ಎರಡೇ ಓವರ್ ಬೌಲ್ ಮಾಡಿದ ಬ್ರೇಸ್‌ವೆಲ್ ೧೩ ಓಟಗಳಿಗೆ ಎರಡು ವಿಕೆಟ್ ಪಡೆಯುವುದರೊಂದಿಗೆ ಆರ್‌ಸಿಬಿ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿದರೆ, ತಮ್ಮ ‘ಮನೆ ಅಂಗಳ’ದಲ್ಲಿ ಆಡುತ್ತಿದ್ದ ಮೊಹಮ್ಮದ್ ಸಿರಾಜ್(೧೭/೧), ಹರ್ಷಲ್ ಪಟೇಲ್(೩೭/೧) ಹಾಗೂ ಶಾಬಾಜ್ ಅಹ್ಮದ್(೩೮/೧) ತಲಾ ಒಂದೊಂದು ಯಶ ಕಂಡರು. ಆರನೇಯವರಾಗಿ ಬೌಲ್ ಮಾಡಿ ೩ ಓವರ್‌ಗಳಲ್ಲಿ ೪೫ ಓಟಗಳಿಗೆ ಹಣಿಯಲ್ಪಟ್ಟ ಲೆಗ್ ಸ್ಪಿನ್ನರ್ ಕರ್ಣ ಶರ್ಮಾ ಬೆಂಗಳೂರು ತಂಡದ ಪಾಲಿಗೆ ತುಂಬಾ ‘ತುಟ್ಟಿ’ಯಾದರು.