ಅಭಿವೃದ್ಧಿಯ ವೇಗ ಹೆಚ್ಚಲಿದೆ

Advertisement

ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯು ಜನರ ಆಶಯಗಳನ್ನು ಪ್ರತಿನಿಧಿಸುವ ಅಧಿಕಾರವನ್ನು ಶಾಸಕರಿಗೆ ನೀಡಿದೆ ಎಂದು ಸುಪ್ರೀಂಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರದ ಜತೆಗೆ ಅಧಿಕಾರದ ವಿಚಾರದಲ್ಲಿ ಗುದ್ದಾಟ ನಡೆಸುತ್ತಿರುವ ದಿಲ್ಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಭೂಮಿ, ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಆಡಳಿತ ಸೇವೆಗಳ ನಿಯಂತ್ರಣವು ದಿಲ್ಲಿ ಸರ್ಕಾರ ನಿಯಂತ್ರಣಕ್ಕೆ ಒಳಪಡುತ್ತದೆ ಎಂದು ಕೋರ್ಟ್ ತಿಳಿಸಿದೆ. ದಿಲ್ಲಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್, ಸೇವೆಗಳ ಕುರಿತಾಗಿ ಮತ್ತು ಸಚಿವ ಸಂಪುಟದ ಸಹಾಯ ಹಾಗೂ ಸಲಹೆಗಳ ಕುರಿತಾದ ಚುನಾಯಿತ ಸರ್ಕಾರದ ನಿರ್ಧಾರಗಳಿಗೆ ಬದ್ಧರಾಗಿರಬೇಕು. ರಾಷ್ಟ್ರಪತಿ ನಿಭಾಯಿಸುವಂತೆ ಆಡಳಿತಾತ್ಮಕ ಪಾತ್ರದಡಿ ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರಗಳಿವೆ. ಆದರೆ ಅದರ ಅರ್ಥ ಇಡೀ ದಿಲ್ಲಿ ಸರ್ಕಾರವನ್ನು ಅವರು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದಲ್ಲ. ಇಲ್ಲದಿದ್ದರೆ ದಿಲ್ಲಿಯಲ್ಲಿ ಪ್ರತ್ಯೇಕ ಸರ್ಕಾರವನ್ನು ಹೊಂದುವ ಉದ್ದೇಶವೇ ಸಂಪೂರ್ಣ ನಿರರ್ಥಕವಾಗುತ್ತದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಇನ್ನು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅರವಿಂದ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸಿದ್ದಾರೆ ಅವರ ಟ್ವೀಟ್‌ನಲ್ಲಿ ದೆಹಲಿ ಜನತೆಗೆ ನ್ಯಾಯ ಒದಗಿಸಿದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ಹೃತ್ಪೂರ್ವಕ ಧನ್ಯವಾದಗಳು. ಈ ನಿರ್ಧಾರದಿಂದ ದೆಹಲಿಯ ಅಭಿವೃದ್ಧಿಯ ವೇಗ ಹಲವು ಪಟ್ಟು ಹೆಚ್ಚಲಿದೆ. ಪ್ರಜಾಪ್ರಭುತ್ವ ಗೆದ್ದಿತು ಎಂದಿದ್ದಾರೆ.