ಅಮೆರಿಕೆಯಲ್ಲಿ ನೆಲೆಸಿರುವ ಕನ್ನಡತಿ, ಪತ್ರಕರ್ತೆ, ಸೇನಾ ದೇಸಾಯಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಹಳ್ಳಿಗಳ ಜನರ ತವಕ-ತಲ್ಲಣಗಳ ಕುರಿತು `ಏಟಿ ಸಿಕ್ಸ್ತವಿಲೇಜ್’ ಎಂಬ ಕಾದಂಬರಿ ರಚಿಸಿದ್ದಾರೆ. ಅದರ ಬಿಡುಗಡೆ ಜುಲೈ ೨೬ರಂದು ಮುಧೋಳ ರನ್ನ ಭವನದಲ್ಲಿ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಮೂಲದ ಸೇನಾ ಅವರ ಮುಳುಗಡೆ ಕಥೆ ಈಗಾಗಲೇ ಸಂಚಲನ ಮೂಡಿಸಿದೆ.
ಕನ್ನಡ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ, ಅಡಿಗೆ, ಉಡಿಗೆ ತೊಡಿಗೆ, ಕುಟುಂಬ ಜೀವನ ಹೀಗೆ ಒಂದು ಅರ್ಥದಲ್ಲಿ ಸಮಗ್ರ ಕರ್ನಾಟಕವನ್ನು ಜಗತ್ತಿಗೆ ಪರಿಚಯಿಸುವ ಅಪರೂಪದ ಕೆಲಸವನ್ನು ಕನ್ನಡತಿ ಸೇನಾ ದೇಸಾಯಿ ಅಮೆರಿಕಾದಲ್ಲಿ ಕಳೆದ ಒಂದೂವರೆ ದಶಕದಿಂದ ಮಾಡುತ್ತಿದ್ದಾರೆ.
ಸೇನಾ ಅವರದು ಬಹುಮುಖ ವ್ಯಕ್ತಿತ್ವ. ಅವರು ಪರಿಸರವಾದಿಯಾಗಿ, ಭಾರತೀಯ ಸಂಸ್ಕೃತಿಯ ಪರಿಚಾರಕಿಯಾಗಿ, ಪತ್ರಕರ್ತೆಯಾಗಿ, ದೂರದ ಅಮೆರಿಕಾದಲ್ಲಿ ಛಾಪು ಮೂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಸೇನಾ ಅವರ ಹುಟ್ಟೂರು. ಅವರ ತಂದೆ ಡಾ.ಎಂ.ಆರ್.ದೇಸಾಯಿ ಸಕ್ಕರೆ ಕೈಗಾರಿಕೋದ್ಯಮಿ, ಅಜ್ಜ ದೊಡ್ಡ ಜಮೀನದಾರ, ಎಂಎಲ್‌ಎ ಮತ್ತು ರಾಜ್ಯಸಭಾ ಸದಸ್ಯರಾಗಿದ್ದವರು. ಶ್ರೀಮಂತಿಕೆ ವೈಭವದಲ್ಲಿ ಸೇನಾ ಕಳೆದು ಹೋಗಬಹುದಾಗಿತ್ತು. ಆದರೆ ಅವರು ತುಂಬ ಆಸಕ್ತಿಯಿಂದ ಪರಿಸರ ವಿಜ್ಞಾನದಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಮತ್ತು ಅಮೆರಿಕಾ ವಿ.ವಿ.ಯಿಂದ ಎರಡು ಎಂ.ಎಸ್.ಸಿ ಡಿಗ್ರಿ ಪಡೆದಿದ್ದಾರೆ. ಸೇನಾ ಕೆಲ ಕಾಲ ಪುಣೆಯಲ್ಲಿ ಪರಿಸರ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಪತ್ರಿಕೋದ್ಯಮದಿಂದ ಆಕರ್ಷಿತರಾದ ಅವರು ಅಮೆರಿಕಾಕ್ಕೆ ತೆರಳಿ ಪತ್ರಕರ್ತರಾಗಿ ಕೆಲಸ ಮಾಡತೊಡಗಿದ್ದಾರೆ. ಅಲ್ಲಿಯೇ ನೆಲೆಸಿ ವೈದ್ಯರಾಗಿರುವ ಡಾ.ಗೋಪಾಲ ಅವರನ್ನು ವಿವಾಹವಾಗಿದ್ದಾರೆ.
ಕರ್ನಾಟಕ ಜನ ಜೀವನ ಕುರಿತು ಅವರು ಬರೆಯುತ್ತಿರುವ ಸಚಿತ್ರ ವರದಿಗಳು ಬಹಳ ಗಮನ ಸೆಳೆಯುತ್ತಿವೆ. ಯಡಹಳ್ಳಿ ತಮ್ಮ ಹಳೆಯ ವಾಡೆಯಲ್ಲಿ (ಭವ್ಯ ದೇಸಗತಿ ಮನೆ) ಹಳೆಯ ಒಲೆ ಬಳಸಿ ಕಟ್ಟಿಗೆಯನ್ನು ಉರುವಲು ಮಾಡಿ ಅಡುಗೆ ಮಾಡುವ ಅವರ ಲೇಖನ ತುಂಬ ಪ್ರಸಿದ್ಧಿ ಪಡೆಯಿತು. ಒಣಗಿದ ಗಿಡಗಂಟಿಗಳನ್ನು ಉರುವಲಾಗಿ ಬಳಸುವ ಅಡಿಗೆ ಒಲೆಯ ಹೊಗೆ ಚಿತ್ರ, ನೆಲಕ್ಕೆ ಕುಳಿತು ಮಹಿಳೆಯೊಬ್ಬರು ಚಪಾತಿ ಲಟ್ಟಿಸುವ ಮತ್ತು ಬೇಯಿಸುವ ಚಿತ್ರಗಳು ವಿಶೇಷ ಗಮನ ಸೆಳೆದವು.
ಭಾರತಿಯ ನಾರಿಯರು ಸ್ನಾನ ಮಾಡಿ ಪೂಜೆ ಸಲ್ಲಿಸಿ ಅಡುಗೆ ಮಾಡುವುದಕ್ಕೆ ಸಿದ್ಧರಾಗುತ್ತಾರೆ. ತುಂಬ ಪೂಜ್ಯ ಭಾವನೆಯಿಂದ ಅಡುಗೆ ಮಾಡುತ್ತಾರೆ ಎಂಬುದನ್ನು ಅವರು ಲೇಖನದಲ್ಲಿ ದಾಖಲಿಸಿದ್ದರು. ಇದರಿಂದ ಪ್ರಭಾವಿತರಾಗಿ ಅನೇಕ ವಿದೇಶಿ ಮಹಿಳೆಯರು ಸ್ನಾನ ಪೂಜೆ ಸಲ್ಲಿಸಿ ತಮ್ಮ ಮುಂಜಾನೆ ಟಿ, ಕಾಫಿ, ಟಿಫನ್ ಮಾಡಿಕೊಳ್ಳ ತೊಡಗಿದ್ದಾರಂತೆ. ಅದು ಅವರ ಮನಸ್ಸಿಗೆ ತುಂಬ ಖುಷಿ ಕೊಡುತ್ತಿದೆಯಂತೆ.
ಅಮೆರಿಕೆಯ ಪತ್ರಿಕೆಗಳು ತಮ್ಮ ಬದ್ಧತೆಯನ್ನು ಗಟ್ಟಿಯಾಗಿ ಕಾಯ್ದುಕೊಂಡು ಬಂದ ಬಗ್ಗೆ ತುಂಬ ಹೆಮ್ಮೆಯಿಂದ ಮಾತನಾಡುತ್ತಾರೆ ಸೇನಾ. ಪ್ರತಿಯೊಂದು ವರದಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಪ್ರಕಟಿಸಲಾಗುತ್ತದೆ. ವ್ಯಕ್ತಿಗತ ಟೀಕೆಗಳನ್ನು ಪ್ರಕಟಿಸುವಾಗಲಂತೂ ಎಲ್ಲವನ್ನು ಗಂಭೀರವಾಗಿ ಅಧ್ಯಯನ ಮಾಡಲಾಗುತ್ತದೆ. ವಿರೋಧü ಮತ್ತು ಪರ ಎರಡೂ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಭಾರತದ ಮಾಧ್ಯಮಗಳಲ್ಲಿ ಯಾವ ಸಂಕೋಚವೂ ಇಲ್ಲದೆ ಟೀಕೆ ಟಿಪ್ಪಣಿಗಳು ಪ್ರಕಟವಾಗುತ್ತವೆ. ಇದು ಅಮೆರಿಕೆಯಲ್ಲಿ ಸಾಧ್ಯವೇ ಇಲ್ಲ ಎಂದು ಅವರು ಹೇಳುತ್ತಾರೆ.
ಅಮೆರಿಕಾದಲ್ಲಿ ಹೆಸರು ಮಾಡಿರುವ ಸೇನಾ ದಿಟ್ಟತನವನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡು ಬೆಳೆದವರು. ಅವರು ನಮ್ಮ ಹಳ್ಳಿಗಾಡಿನ ಸ್ತ್ರೀ ಶಕ್ತಿ, ಛಲ, ಶ್ರಮ ಸಂಸ್ಕೃತಿಗೆ ಸಾಕ್ಷಿಯಾಗಿದ್ದಾರೆ.
– ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ