ಅಮಿತ್ ಶಾ ಭೇಟಿ: ವಿರೋಧಿಗಳಿಗೆ ನಡುಕ

Advertisement

ಪುತ್ತೂರು : ರಾಜ್ಯದಲ್ಲಿ ಅಮಾಯಕರ ಹತ್ಯೆಗೈದ ಮತಾಂಧರಿಗೆ ಹಾಗೂ ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ತೇವೆ ಎನ್ನುವ ಸಂದೇಶ ನೀಡುವ ಕಾರ್ಯಕ್ರಮ ಫೆ. ೧೧ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅಮಿತ್ ಶಾ ಅವರು ಪುತ್ತೂರಿಗೆ ಮೊದಲ ಬಾರಿಗೆ ಬರುತ್ತಿದ್ದಾರೆ. ಇದಕ್ಕಾಗಿ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಅಮಿತ್ ಶಾ ಆಗಮನದಿಂದ ಅಭಿಮಾನಿಗಳಿಗೆ ಖುಷಿ, ವಿರೋಧಿಗಳಿಗೆ ನಡುಕ ಹುಟ್ಟಿಕೊಂಡಿದೆ. ಅದೇನೆ ಇದ್ದರೂ, ಅಮಿತ್ ಶಾ ಅವರಿಗೆ ಬಹಳ ಅದ್ದೂರಿಯಾಗಿ ಸ್ವಾಗತ ನೀಡಲಿದ್ದೇವೆ. ಅಡಕೆಗೆ ಹಳದಿ ರೋಗ, ಎಲೆಚುಕ್ಕಿ ರೋಗದಿಂದ ರೈತರಿಗೆ ಹಾನಿಯಾಗಿದೆ ಇದನ್ನು ಸಹಕಾರಿ ಸಚಿವರ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಮುಂದೆ ನೆಮ್ಮದಿಯ ದಿನಗಳನ್ನು ರೈತರು ಕಾಣಬಹುದು ಎಂದರು.
ಪ್ರವೀಣ್ ನೆಟ್ಟಾರು ಹತ್ಯೆಯ ಮೂಲಕ ದ.ಕ. ಜಿಲ್ಲೆಯಲ್ಲಿ ಮತೀಯ ಘಟನೆಗಳಿಗೆ ಮತೀಯ ಸಂಘಟನೆಗಳು ಎಡೆ ನೀಡಿತು. ಇದನ್ನು ಮಟ್ಟ ಹಾಕಲು ಎನ್‌ಐಎಗೆ ಅಧಿಕಾರ ನೀಡಿ, ಮತೀಯರಿಗೆ ಸಿಂಹಸ್ವಪ್ನರಾಗದವರು ಅಮಿತ್ ಶಾ. ಈ ಮೂಲಕ ಜನರ ಸ್ನೇಹ ಸಂಪಾದಿಸಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮವನ್ನು ಐತಿಹಾಸಿಕ ಕಾರ್ಯಕ್ರಮವಾಗಿ ಮಾಡುತ್ತೇವೆ ಎಂದರು.
ಮಳೆ ಬಂದಾಗ ಕೆಲ ಅಣಬೆಗಳು ಹುಟ್ಟಿಕೊಂಡಂತೆ ಹೊಸ ಹೊಸ ಬ್ಯಾನರ್ ಗಳು ಪುತ್ತೂರಿನಲ್ಲಿ ಹುಟ್ಟಿಕೊಂಡಿದೆ. ಇಂತಹ ಬ್ಯಾನರ್ ಗಳನ್ನು ಬಿಜೆಪಿ ಸ್ವಾಗತಿಸುತ್ತಿದೆ. ಇವನ್ನು ಅರಗಿಸಿಕೊಳ್ಳಲು ಬಿಜೆಪಿ ಶಕ್ತ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ್ ರಾವ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಬೂಡಿಯಾರ್ ರಾಧಾಕೃಷ್ಣ ಆಳ್ವ, ಸಹಜ್ ರೈ ಬಳಜ್ಜ, ಗೋಪಾಲಕೃಷ್ಣ ಹೇರಳೆ,ಭಾಮಿ ಅಶೋಕ್ ಶೆಣೈ,ಅಪ್ಪಯ್ಯ ಮಣಿಯಾಣಿ, ಪುರುಷೋತ್ತಮ ಮುಂಗ್ಲಿಮನೆ, ಆರ್.ಸಿ. ನಾರಾಯಣ್, ಚಂದ್ರಶೇಖರ ಬಪ್ಪಳಿಗೆ,ರಾಜೇಶ್ ಬನ್ನೂರು ಉಪಸ್ಥಿತರಿದ್ದರು.