ಅಮೃತ ಸಮಾಚಾರ

Advertisement

ದಿನಾಂಕ: 02-01-1948 (ರವಿವಾರ)

ಕಾಶ್ಮೀರದಲ್ಲಿ ಯುದ್ಧ ನಿಂತಿತು!
ಹೊಸದಿಲ್ಲಿ – ಕಾಶ್ಮೀರದಲ್ಲಿ ಯುದ್ಧ ನಿಲ್ಲಿಸಲು ಆಜ್ಞೆ ಕೊಡಲಾಗಿದೆ. ಇಂದೇ ಮಧ್ಯರಾತ್ರಿಗೆ ೧ ನಿಮಿಷ ಇರುವಾಗ ಯುದ್ಧ ನಿಲ್ಲಿಸತಕ್ಕದ್ದೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಪಾಕಿಸ್ತಾನವು ಯುದ್ಧ ನಿಲ್ಲಿಸಲು ಸಮ್ಮತಿಸಿದರೆ ಹಿಂದುಸ್ತಾನವು ಯುದ್ಧ ನಿಲ್ಲಿಸುವದಾಗಿ ಪಾಕಿಸ್ತಾನದ ಸೇನಾಪತಿ ಸರ ಡಗ್ಲಸ ಗ್ರೇಸೀ ಇವರಿಗೆ ತಿಳಿಸಿ ಯುದ್ಧ ನಿಲ್ಲಿಸುವ ಬಗ್ಗೆ ವಚನಕೊಡಲು ಅವರಿಗೆ ಶಕ್ಯವಾಗುವದೋ ಹೇಗೆ ಎಂಬದನ್ನು ತಿಳಿದುಕೊಳ್ಲಲು ಹಿಂದುಸ್ತಾನದ ಮುಖ್ಯ ಸೇನಾಪತಿ ಸರ ರಾಯ ಬುಚರ ಇವರಿಗೆ ಹಿಂದುಸ್ತಾನ ಸರಕಾರವು ಅಧಿಕಾರ ಕೊಟ್ಟಿತ್ತು. ಈ ಅಧಿಕಾರದನ್ವಯ ಹಿಂದುಸ್ತಾನದ ಮುಖ್ಯ ಸೇನಾಪತಿ ಸರರಾಯ ಬಿಚರ ಇವರು ಪಾಕಿಸ್ತಾನ ಮುಖ್ಯ ಸೇನಾಪತಿಗೆ ಪತ್ರ ಬರೆದಿದ್ದರು. ಪಾಕಿಸ್ತಾನ ಮುಖ್ಯ ಸೇನಾಪತಿಯು ಪಾಕಿಸ್ತಾನ ಸರಕಾರದಿಂದ ಯುದ್ಧ ನಿಲ್ಲಿಸುವ ಬಗ್ಗೆ ಆಶ್ವಾಸನ ಪಡೆದುಕೊಂಡು ಅದರಂತೆ ಹಿಂದುಸ್ತಾನದ ಮುಖ್ಯ ಸೇನಾಪತಿಗೆ ತಿಳಿಸಿದ್ದಾರೆ.

ಒತ್ತಾಯವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು
ಧಾರವಾಡ – `ಒತ್ತಾಯದಿಂದ ಮೈಸೂರನ್ನು ವಿಲೀನಗೊಳಿಸುವದು ಬೇಡ ಒತ್ತಾಯವು ಪ್ರಜಾಪ್ರಭುತ್ವ ತತ್ವಕ್ಕೆ ವಿರೋಧಕವಾದುದು. ಹಾಗೆ ಮಾಡುವದೂ ಜಾನತನದ್ದಾಗಲಾರದು. ಇದೀಗ ಮೈಸೂರ ಮತ್ತು ನಮ್ಮ ನಡುವೆ ಬೀಗತನದ ಮಾತುಕತೆ ನಡೆದಿವೆ. ಅವು ಫಲಿಸಿ ಸುಂದರ ಒಗೆತನವಾಗಿ ನಮ್ಮ ಪರಂಪರೆ ಉಜ್ವಲವಾಗುವದೆಂದು ನನಗೆ ಆಸೆ ಇದೆ. ಯಾರೊಬ್ಬರು ಕಾಲಮಾನ ಪರಿಸ್ಥಿತಿಗೆ ತಕ್ಕಂತೆ ಅಭಿಪ್ರಾಯ ಬದಲಿಸಿದರೆ ಅಪ್ರಾಮಾಣಿಕತೆಯ ಇಲ್ಲವೆ ದುರುದ್ದೇಶದ ಆರೋಪ ಅವರ ಮೇಲೆ ಹೊರಿಸುವದು ಸರಿಯಾಗಲಾರದು. ಸಮಾಜ ಸೇವೆಯೇ ನಾವು ಮಾಡತಕ್ಕ ಕೆಲದ ಆದುದರಿಂದ ನಾವೆಲ್ಲ ಸಮಾಜ ಸೇವೆ ಮಾಡಿ ನಮ್ಮ ಕರ್ನಾಟಕವನ್ನು ಭಾರತವನ್ನು ಅಷ್ಟೇ ಏಕೆ ಇಡೀ ಜಗತ್ತನ್ನು ಉಜ್ವಲಗೊಳಿಸುವಾ. ನಿಮ್ಮೆಲರ ಪ್ರೇಮಾದರಗಳು ನನ್ನನ್ನು ಹುರುಪುಗೊಳಿಸುತ್ತವೆ. ಕರ‍್ಯ ಮಾಡಲು ಪ್ರೋತ್ಸಾಹಿಸುತ್ತವೆ.
ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಈ ದಿನ ಸಾಯಂಕಾಲ ಆಜಾದ ಉಪವನದಲ್ಲಿ ಕೂಡಿದ ಪ್ರಚಂಡ ಜಾಹೀರ ಸಭೆಯಲ್ಲಿ ಶ್ರೀ ರಂಗರಾವ ದಿವಾಕರರು ಅಪ್ಪಣೆ ಕೊಡಿಸಿದರು.