ಅಮೃತ ಸಮಾಚಾರ

Advertisement

೧೦-೦೧-೧೯೪೯ ಸೋಮವಾರ

ಹಿಂದೀ ಪತ್ರಿಕೆಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ
ಮುಂಬಯಿ ೯- ಹಿಂದೂಸ್ತಾನದ ಪತ್ರಿಕೆಗಳಿಗೆ ಇಂಗ್ಲಂಡದ ಪತ್ರಿಕೆಗಳಿಗಿರುವಷ್ಟೇ ಸ್ವಾತಂತ್ರ್ಯವಿರುವದೆಂದು ಗವರ್ನರ ಜನರಲ್ ಶ್ರೀ ರಾಜಗೋಪಾಲಾಚಾರ್ಯರು ಇಂದು ರಾತ್ರಿ ಮುಂಬಯಿ ಪತ್ರಿಕೋದ್ಯಮಿಗಳು ತಾಜಮಹಾಲ ಹೋಟೆಲಿನಲ್ಲಿ ಏರ್ಪಡಿಸಿದ ಸತ್ಕಾರ ಸಮಾರಂಭದಲ್ಲಿ ಭಾಷಣ ಮಾಡುತ್ತ ಹೇಳಿದರು.
ಹಿಂದೀ ಪತ್ರಿಕೆಗಳ ಭವಿತವ್ಯವು ಸರಕಾರದ ಕೈಯಲ್ಲಿ ಸುರಕ್ಷಿತವಿದೆಯೆಂದು ಅವರು ಆಶ್ವಾಸನವಿತ್ತರು.
ಮುಂಬಯಿ ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎ. ಬ್ರೆಳ್ವಿಯವರಿಗೆ ಒಮ್ಮೆಲೇ ಹೃದಯ ವಿಕಾರವುಂಟಾಗಿ ಸಭೆಗೆ ಬಾರದ್ದರಿಂದ [ಇವರ ನಿಧನದ ಸುದ್ದಿ ಬೇರೆ ಕಡೆ ಕೊಟ್ಟಿದೆ] ನಗರದ ಇನ್ನೊಬ್ಬ ಪ್ರಮುಖ ಪತ್ರಿಕೋದ್ಯೋಗಿಯಾದ ಶ್ರೀ ಕೆ ಗೋಪಾಲಸ್ವಾಮಿಯವರು ಮಾನ ಪತ್ರವನ್ನೋದಿದರು. ಹಿಂದೀ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಚಿರಸ್ಮರಣೀಯ ಸಾಹಸದ ಪಾತ್ರ, ಪರಕೀಯ ಸರಕಾರದ ಕಟ್ಟು ಕಾಯಿದೆಗಳ ವಿರುದ್ಧ ನಡೆಸಿದ ಸಂಗ್ರಾಮ ಮೊದಲಾದವುಗಳನ್ನು ಮಾನ ಪತ್ರದಲ್ಲಿ ವಿವರಿಸಲಾಗಿದ್ದಿತು ಮತ್ತು ಪತ್ರಿಕೆಗಳು ಇದ್ಕಕಾಗಿ ಹೆಮ್ಮೆ ತಳೆದಿಲ್ಲವೆಂದೂ ತಮ್ಮ ಕರ್ತವ್ಯ ನೆರವೇರಿಸಿದ ಸಮಾಧಾನ ಅವುಗಳಿಗುಂಟಾಗಿದೆಯೆಮದೂ ಸೂಚಿಸಲಾಗಿದ್ದಿತು.

ವರ್ಗರಹಿತ ಸಮಾಜದ ರಚನೆಯೇ ನಮ್ಮ ಧ್ಯೇಯ
ಮುಂಬಯಿ ೯- ಮಹಾತ್ಮಾ ಗಾಂಧೀಜಿಯ ತತ್ವದ ಸಹಾಯದಿಂದಲೇ ವರ್ಗರಹಿತವಾದ ಸಮಾಜವನ್ನು ಕಟ್ಟಬಲ್ಲೆವು; ಕಮ್ಯುನಿಝಮದಿಂದ ಶಕ್ಯವಿಲ್ಲ ಹೀಗೆಂದು ಹಿಂದುಸ್ತಾನ ಸರಕಾರದ ಕೂಲಿಕಾರ ಮಂತ್ರಿಗಳಾದ ಶ್ರೀ ಜಗಜೀವನರಾಮರು ರಾಷ್ಟ್ರೀಯ ಗಿರಣಿ ಮಜದೂರ ಸಂಘದ ಪ್ರತಿನಿಧಿಗಳನ್ನುದ್ದೇಶಿಸಿ ಮಾತಾಡುತ್ತ ಹೇಳಿದರು. ಅವರು ಮುಂದೆ ಸಾಗಿ:- ಉಗ್ರವಾದಿಗಳು ಮತ್ತು ಕ್ರಾಂತಿಕಾರರು ಎಂದು ಹೇಳಿಕೊಳ್ಳುವ ವರ್ಗ ಈ ದೇಶದಲ್ಲಿದೆ. ಅವರು ಕೂಲಿಕಾರರ ಹಿತ ಸಾಧನೆಯ ಸೋಗಿನಲ್ಲಿ ಪೊಳ್ಳು ಘೋಷಣೆಗಳಿಂದ ಅವರನ್ನು ಮರುಳಗೊಳಿಸಿ ತಮ್ಮ ರಾಜಕೀಯ ಸ್ವಾರ್ಥವನ್ನು ಸಾಧಿಸಿಕೊಳ್ಳುವರು.