ಅಯೋಧ್ಯ ಶ್ರೀರಾಮ ಸೇವೆಗೆ ಧರ್ಮಸ್ಥಳದಿಂದ ಬೆಳ್ಳಿಯ ಪೂಜಾ ಸಾಮಗ್ರಿ

Advertisement

ಮಂಗಳೂರು: ಅಯೋಧ್ಯೆಯಲ್ಲಿ ಮತ್ತೆ ಶ್ರೀರಾಮ ವೈಭವ ಮರುಕಳಿಸುತ್ತಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ. ಪ್ರಭು ಶ್ರೀರಾಮನ ಸೇವೆಗಾಗಿ ಶ್ರೀ ಕ್ಷೇತ್ರದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಸಮರ್ಪಿಸುತ್ತಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಭಾರತೀಯರ ಅನೇಕ ವರ್ಷದ ಕನಸು, ನಿರೀಕ್ಷೆಗಳು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಸಾಕಾರಗೊಂಡಿದೆ.ಈ ದಿನ ಐತಿಹಾಸಿಕವಾಗಿದೆ ಮತ್ತು ಭಾವನಾತ್ಮಕವಾಗಿ ಕೋಟ್ಯಂತರ ಭಕ್ತರ ಪಾಲಿಗೆ ಸದಾ ಅವಿಸ್ಮರಣೀಯವಾಗಿದೆ.ಈ ಮಹತ್ ಕಾರ್ಯದ ನೇತೃತ್ವ ವಹಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲರನ್ನು ಅಭಿನಂದಿಸುತ್ತೇನೆ.
ಬಾಲ್ಯದಿಂದಲೂ ರಾಮಾಯಣದ ಕಥೆ ಕೇಳುತ್ತಾ ಬೆಳೆದಿದ್ದೇವೆ. ದಶಕಗಳ ಹಿಂದೆ ಮೂಡಿ ಬಂದಿದ್ದ ಧಾರವಾಹಿಯೂ ಬಹಳ ಪ್ರಖ್ಯಾತಿ ಪಡೆದಿತ್ತು. ಬಳಿಕ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಟಿ.ವಿ.ಯಲ್ಲಿ ಧಾರವಾಹಿಯಾಗಿ ರಾಮಾಯಣವು ಪ್ರಸಾರವಾದಾಗ ಜನರಿಗೆ ಅಯೋಧ್ಯೆ, ಶ್ರೀರಾಮನ ಕುರಿತು ಇನ್ನಷ್ಟು ತಿಳಿಯಲು ಸಹಕಾರಿಯಾಯಿತು. ಆಗ ನಾಡಿಗೆ ನಾಡೇ ಧಾರವಾಹಿಯನ್ನು ವೀಕ್ಷಿಸಿ ಭಕ್ತಿ ಪರವಶರಾಗುತ್ತಿದ್ದರು. ಶ್ರೀರಾಮನು ಪ್ರತಿಯೊಬ್ಬ ಭಾರತೀಯನ ಹೃದಯ ಮಂದಿರಲ್ಲಿ ನೆಲೆಸಿದ್ದಾನೆ. ರಾಮಾಯಣವು ನಮ್ಮೆಲ್ಲರ ಬದುಕಿಗೆ ಬಹು ಹತ್ತಿರವಿದ್ದು, ಭಾರತೀಯರ ಅಸ್ಮಿತೆಯಾಗಿದೆ. ರಾಮನ ವ್ಯಕ್ತಿತ್ವ ಎಲ್ಲ ಧರ್ಮ ಮತ್ತು ರಾಜಕೀಯ ವಿಚಾರಗಳನ್ನು ಮೀರಿದ್ದು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಗಿದೆ. ಶ್ರೀ ರಾಮಚಂದ್ರನ ಆದರ್ಶ ಹಾಗೂ ಮಹೋನ್ನತವಾದ ಗುಣಗಳು ಪ್ರತಿಯೊಬ್ಬರಲ್ಲೂ ಮೂಡಿಬರಲಿ ಎಂದವರು ಸಂದೇಶದಲ್ಲಿ ತಿಳಿಸಿದ್ದಾರೆ.