ಸಿದ್ದಾಪುರ: ಅರಣ್ಯ ಜಾಗದಲ್ಲಿ ಹೊಸ ಅತಿಕ್ರಮಣ ಮಾಡಿದ್ದನ್ನು ಪ್ರಶ್ನಿಸಿದ ಅರಣ್ಯ ಅಧಿಕಾರಿಗಳ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ತಾಲೂಕಿನ ಬಾಳೆಕೈ ಗ್ರಾಮದ ಬಿಳೆಗೋಡನಲ್ಲಿ ನಡೆದಿದೆ.
ಉಪವಲಯ ಅರಣ್ಯಾಧಿಕಾರಿ ವಿಶ್ವನಾಥ ತಿಮ್ಮಪ್ಪ ನಾಯ್ಕ, ಅರಣ್ಯರಕ್ಷಕರಾದ ರಾಜೇಶ ಮಂಜುನಾಥ ಗೌಡ, ಮಣಿಕಂಠ, ರೋಹಿತ ನಾಯ್ಕ, ವಾಚ್‌ಮನ್ ಗೋಪಾಲ ನಾಯ್ಕ ಅವರು ಕಾನಸೂರು ಭಾಗದ ಅರಣ್ಯದಲ್ಲಿ ಗಸ್ತಿಗೆ ಹೋಗಿದ್ದಾಗ ಬಿಳೆಗೋಡ ಊರಿನ ಮಾಬ್ಲೇಶ್ವರ ಚಂದು ಮರಾಠಿ ಎಂಬಾತ ತನ್ನ ಮಾಲ್ಕಿ ಜಾಗದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹೊಸ ಶೆಡ್ ನಿರ್ಮಿಸಿಕೊಂಡಿದ್ದು ಕಂಡು ಬಂದಿದೆ. ಅರಣ್ಯ ಪ್ರದೇಶದಲ್ಲಿ ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ. ನೀನು ನಿನ್ನ ಮಾಲ್ಕಿ ಜಾಗದಲ್ಲಿ ಮನೆ ಕಟ್ಟಿಕೊ ಎಂದು ಹೇಳಿದ್ದಾರೆ.
ಇದಕ್ಕೆ ಸಿಟ್ಟಿಗೆದ್ದ ಮಾಬ್ಲೇಶ್ವರ ಮರಾಠಿ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ನಿಮ್ಮಲ್ಲಿ ಒಬ್ಬರನ್ನು ತೆಗೆದರೆ ಇನ್ನು ಮುಂದೆ ಮತ್ತಾö್ಯರೂ ನಮ್ಮ ಸುದ್ದಿಗೆ ಬರೋದಿಲ್ಲ. ನೀವು ಇಲ್ಲಿಂದ ಹೇಗೆ ಜೀವಂತ ಮರಳಿ ಹೋಗುತ್ತೀರಿ ನೋಡುತ್ತೇನೆ ಎಂದು ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅವರ ಮೇಲೆ ಎರಗಿದ್ದಾನೆ. ಕೈಯಲ್ಲಿದ್ದ ಕತ್ತಿಯನ್ನು ವಿಶ್ವನಾಥರವರ ಕುತ್ತಿಗೆಯತ್ತ ಬೀಸಿದ್ದು, ಅವರು ತಪ್ಪಿಸಿಕೊಳ್ಳಲು ಬಲಗೈಯನ್ನು ಅಡ್ಡ ತಂದಿದ್ದರಿಂದ ಕತ್ತಿಯ ಏಟು ಬಲಗೈನ ಬೆರಳಿಗೆ ಬಿದ್ದು ಗಂಭೀರ ಗಾಯವಾಗಿದೆ. ಆತ ರಾಜೇಶ ಗೌಡ ಮೇಲೂ ಎರಗಿದ್ದು, ಅವರ ಎಡಕೈ ಬೆರಳಿಗೆ ತಾಗಿ ಗಾಯವಾಗಿದೆ. ಅರಣ್ಯ ಇಲಾಖೆಯ ಇತರ ಸಿಬ್ಬಂದಿ ಸೇರಿ ತಮ್ಮ ಸಹೋದ್ಯೋಗಿಗಳನ್ನು ಬಿಡಿಸಿಕೊಂಡಿದ್ದಾರೆ.
ಸ್ಥಳೀಯ ಠಾಣೆಯಲ್ಲಿ ಅರಣ್ಯ ರಕ್ಷಕ ರಾಜೇಶ ಗೌಡ ದೂರು ಸಲ್ಲಿಸಿದ್ದು, ಆರೋಪಿ ಮಾಬ್ಲೇಶ್ವರ ಚಂದು ಮರಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.