ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ

Advertisement

ಮಂಗಳೂರು: ಪ್ರಕರಣ ಹೈಕೋರ್ಟ್‌ನಲ್ಲಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಇದು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣವಾಗಿದೆ. ಇದನ್ನು ಜಾರಿಗೆ ತಂದರೆ, ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು ಧಾರಣೆಯನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹಿಜಾಬ್‌ನ್ನು ವಿವಾದವಾಗಿ ಮಾಡಿದ ನಿಷೇಧಿತ ಪಿಎಫ್‌ಐ ಸಂಘಟನೆಯವರು ಈಗ ಕಾಂಗ್ರೆಸ್ ಜತೆ ಗುರುತಿಸಿಕೊಂಡು ‘ಬಿ’ ಟೀಂ ಎನಿಸಿಕೊಂಡಿದ್ದಾರೆ. ಸರ್ಕಾರ ಅಭಿವೃದ್ಧಿ ಕಾರ್ಯ ನಡೆಸುವುದು ಬಿಟ್ಟು ವಿವಾದಿತ ವಿಚಾರಗಳನ್ನು ಕೆಣಕುತ್ತಿದೆ. ಎಸ್‌ಸಿ ಎಸ್‌ಟಿ ಮೀಸಲು ನಿಧಿಯನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವರ್ಗಾಯಿಸುವ ಮೂಲಕ ಸಮುದಾಯಗಳ ನಡುವೆ ತಾರತಮ್ಯ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.
ಹಿಜಾಬ್ ಧರಿಸಲು ಅವಕಾಶ ನೀಡುವ ಸಿಎಂ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ೧೦ ಸಾವಿರ ಕೋಟಿ ರೂ. ನೀಡುತ್ತೇನೆ ಎಂದು ಹೇಳಿ ಸಮುದಾಯಗಳ ಮಧ್ಯೆ ಗೊಂದಲ ಉಂಟು ಮಾಡಿದ್ದರು. ಈಗ ಕೋರ್ಟ್‌ನಲ್ಲಿ ಇರುವ ಹಿಜಾಬ್ ವಿವಾದವನ್ನು ಮತ್ತೆ ಕೆಣಕಿದ್ದಾರೆ. ಸಿಎಂ ಅವರ ಈ ನಡವಳಿಕೆಯನ್ನು ಖಂಡಿಸುವುದಾಗಿ ಅವರು ಹೇಳಿದರು.
ಯುನಿಫಾರಂ ಗತಿ ಏನು?:
ಶಾಲಾ ಕಾಲೇಜುಗಳಲ್ಲಿ ಸಮಾನತೆ ಸಲುವಾಗಿ ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಮತ್ತೆ ಹಿಜಾಬ್ ಧರಿಸುವುದಾದರೆ, ಸಮವಸ್ತ್ರ ನೀತಿಗೆ ಅರ್ಥ ಏನು? ಹಿಂದೆ ಬಿಜೆಪಿ ಸರ್ಕಾರ ಸಮವಸ್ತ್ರ ನೀತಿ ಜಾರಿಗೆ ತರುವ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಕಾಯ್ದುಕೊಂಡಿತ್ತು. ಈಗ ಏಕಾಏಕಿ ಕಾಂಗ್ರೆಸ್ ಸರ್ಕಾರ ಶೈಕ್ಷಣಿಕ ಶಿಸ್ತನ್ನು ಹಾಳು ಮಾಡಲು ಹೊರಟಿದೆ. ಓರ್ವ ಜನಪ್ರತಿನಿಧಿಯಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ವಿಚಾರ ತರುತ್ತಿರುವುದನ್ನು ವಿರೋಧಿಸುವುದಾಗಿ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಪರೀಕ್ಷಾ ಕೊಠಡಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮಾತ್ರ ಹಿಜಾಬ್ ರಿಯಾಯ್ತಿ ನೀಡುವುದೇ ಮೊದಲಾದ ಕಾಂಗ್ರೆಸ್‌ನ ಧೋರಣೆಯನ್ನು ತೀವ್ರವಾಗಿ ವಿರೋಧಿಸಿ ಹೋರಾಟ ನಡೆಸಲಾಗುವುದು ಎಂದರು.
ಸ್ಪೀಕರ್ ಖಾದರ್ ನಿಲುವು ಏನು?
ಕಳೆದ ಬಾರಿ ಹಿಜಾಬ್ ವಿವಾದ ತಲೆದೋರಿದಾಗ ಶಾಸಕರಾಗಿದ್ದ ಯು.ಟಿ.ಖಾದರ್ ಅವರು ಶೈಕ್ಷಣಿಕ ಶಿಸ್ತು ಕಾಪಾಡುವುದು ಮುಖ್ಯ. ಹೈಕೋರ್ಟ್ ತೀರ್ಪನ್ನು ಪಾಲಿಸಲೇ ಬೇಕು ಎಂದು ಹಿಜಾಬ್ ರದ್ಧತಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಈಗ ಹೈಕೋರ್ಟ್ ತೀರ್ಪಿಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಹಿಜಾಬ್ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಈಗ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಏನು ಹೇಳುತ್ತಾರೆ. ಹಾಗಾದರೆ ಖಾದರ್ ಹಾಗೂ ಸಿದ್ದರಾಮಯ್ಯ ನಿಲುವು ಬೇರೆ ಬೇರೆಯೇ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದರು.
ವಿದ್ಯಾರ್ಥಿಗಳೇ ಭವಿಷ್ಯ ಹಾಳು ಮಾಡಬೇಡಿ:
ಹಿಜಾಬ್ ವಿಚಾರದಲ್ಲಿ ಕಳೆದ ಬಾರಿ ಕೆಲವೊಂದು ಸಂಘಟನೆಗಳು ವಿದ್ಯಾರ್ಥಿಗಳ ಹಾದಿ ತಪ್ಪಿಸಿವೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುವಂತಾಗಿತ್ತು. ಈ ಬಾರಿಯೂ ಸಂಘಟನೆಗಳ ಮಾತು ಕೇಳಿ ತಮ್ಮ ಶಿಕ್ಷಣವನ್ನು ಹಾಳು ಮಾಡಿಕೊಳ್ಳಬೇಡಿ. ತಮ್ಮ ಜೀವನನ್ನು ರೂಪಿಸುವುದು ಕೇವಲ ಧಾ ರ್ಮಿಕ ಶಿಕ್ಷಣ ಮಾತ್ರ ಅಲ್ಲ ಎಂಬುದು ನೆನಪಿನಲ್ಲಿರಲಿ. ಹಿಂದು ಧರ್ಮ ಯಾವುದೇ ಧರ್ಮದ ವಿರೋಧಿ ಅಲ್ಲ ಎಂಬುದು ಗೊತ್ತಿರಲಿ. ವಿದ್ಯಾರ್ಥಿಗಳು ಹೂ ಮುಡಿಯುವುದು, ಮಳೆ ತೊಡುಗುವು, ತಿಲಕ ಧರಿಸುವುದನ್ನು ವಿರೋಧಿಸುವ ಶಿಕ್ಷಣ ಸಂಸ್ಥೆಗಳು ಹಿಜಾಬ್ ವಿಚಾರದಲ್ಲೂ ಕಟ್ಟುನಿಟ್ಟಿನ ನಿಲುವು ಪ್ರದರ್ಶಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದರು.
ಕೊರೋನಾ ಸೋಂಕು ನಿರ್ವಹಣೆಯಲ್ಲೂ ವಿಫಲ:
ಕೊರೊನಾ ಸೋಂಕಿನ ಆರಂಭಿಕ ನಿರ್ವಹಣೆಯಲ್ಲೇ ರಾಜ್ಯ ಸರ್ಕಾರ ವಿಫಲವಾಗಿದ್ದು, ಸರ್ಕಾರ ಯಾವುದೇ ಸಭೆಗಳನ್ನು ನಡೆಸಲು ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದರು.
ಮಂಗಳೂರಿನಲ್ಲಿ ಕೋವಿಡ್‌ನಿಂದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಹೀಗಿದ್ದೂ ಸರ್ಕಾರ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸದೆ ನಿಗಮ ಮಂಡಳಿ ರಚನೆ, ದೆಹಲಿ ಪ್ರವಾಸ, ತೆಲಂಗಾಣ ಚುನಾವಣೆ ಗೆಲುವಿನ ವಿಷಯಗಳಲ್ಲಿ ನಿರತವಾಗಿದೆ. ಆಸ್ಪತ್ರೆಗಳಲ್ಲಿ ಕೊರೋನಾ ಎದುರಿಸಲು ಇರುವ ಸಿದ್ಧತೆಗಳು ಏನು?, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಮಾತನಾಡದೆ ಮೌನ ವಹಿಸಿದೆ ಎಂದು ಅವರು ಆರೋಪಿಸಿದರು.