ಅಲ್ಪಾವಧಿಯಲ್ಲಿ ಅದಾನಿಯನ್ನು ಬೆಳೆಸಿದ ಜಾದೂ ಇತರರಿಗೂ ಸ್ವಲ್ಪ ಹೇಳಿ

Advertisement

ಮಂಗಳೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದಿಂದ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿ ಇದ್ದು, ಇದರ ಉಳಿವಿಗೆ ಪಕ್ಷದೊಳಗೆ ಇರಬಹುದಾದ ಎಲ್ಲ ರೀತಿಯ ಸಣ್ಣಪುಟ್ಟ ಅಭಿಪ್ರಾಯ ವ್ಯತ್ಯಾಸಗಳನ್ನು ಮರೆತು ಜತೆಯಾಗಿ ಕೆಲಸ ಮಾಡಿ. ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
2014 ರಲ್ಲಿ ಅದಾನಿಯವರ ಸಂಪತ್ತು 50 ಸಾವಿರ ಕೋಟಿ ರೂ ಇತ್ತು. 2020 ರಲ್ಲಿ ಈ ಸಂಪತ್ತು ಎರಡು ಲಕ್ಷ ಕೋಟಿ ರೂ. ವಿಗೆ ಏರಿತು. ಆದರೆ 2020ರ ನಂತರ ಕೇವಲ ಎರಡೂವರೆ ವರ್ಷದಲ್ಲಿ ಅವರ ಸಂಪತ್ತು 12 ಲಕ್ಷ ಕೋಟಿ ರೂ.ಗೆ ಏರಿದೆ. ಇದು ಹೇಗೆ ಸಾಧ್ಯವಾಯಿತು? ಅವರಿಗೆ ಎಲ್ಲ ಪೌಷ್ಟಿಕ ಆಹಾರ ನೀಡಿದ್ದೇ ಮೋದಿ ಸರ್ಕಾರ. ಸರ್ಕಾರಿ ಸ್ವಾಮ್ಯದ ಆಸ್ತಿಗಳಾದ ಬಂದರು, ಏರ್‌ಪೋರ್ಟ್‌ಗಳು, ರೈಲ್ವೆ ಇತ್ಯಾದಿಗಳನ್ನು ಅದಾನಿಗೆ ಹಸ್ತಾಂತರಿಸಿದ್ದಾರೆ. ಜನರಿಗೆ ಉಪಯೋಗವಾಗಬೇಕಾದ ಪ್ರಾವಿಡೆಂಟ್ ಫಂಡ್‌ನ್ನೂ ನೀಡಿದ್ದಾರೆ. ಅಲ್ಪಾವಧಿಯಲ್ಲಿ ಅದಾನಿಯವರನ್ನು ಅಸಹಜ ರೀತಿಯಲ್ಲಿ ನೀವು ಬೆಳೆಸಿದ ಮ್ಯಾಜಿಕ್ ಅನ್ನು ನಮ್ಮ ದೇಶದ ಇತರ ಉದ್ಯಮ ಆಕಾಂಕ್ಷಿಗಳಿಗೂ ಸ್ವಲ್ಪ ಹೇಳಿ ಎಂದು ಅವರು ಪ್ರಧಾನಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದರು.
ಜನರಿಗೆ ಉಪಯೋಗವಾಗಬೇಕಾದ ಪ್ರಾವಿಡೆಂಟ್ ಫಂಡ್‌ನ್ನೂ ಅದಾನಿಗೆ ನೀಡಿದ್ದಾರೆ. ನರೇಂದ್ರ ಮೋದಿ ಹೊರ ದೇಶಗಳಿಗೆ ಹೋಗುವಾಗ ಜತೆಗೇ ಅದಾನಿ ಅವರನ್ನು ಕರೆದೊಯ್ಯುತ್ತಾರೆ. ವಿದೇಶದಲ್ಲಿ ಅದಾನಿ ಉದ್ಯಮ ಆರಂಭಿಸಲು ಸ್ವತಃ ಮೋದಿಯವರೇ ಮದ್ಯಸ್ಥಿಕೆ ವಹಿಸುತ್ತಾರೆ. ಓರ್ವ ವ್ಯಕ್ತಿಯಲ್ಲಿ ಮಾತ್ರ ಯಾಕೆ ನಿಮಗೆ ವಿಶೇಷ ಪ್ರೀತಿ ಎಂದು ಪ್ರಧಾನಿಯವರನ್ನು ಉದ್ದೇಶಿಸಿ ನಾನು ರಾಜ್ಯಸಭೆಯಲ್ಲಿ ಕೇಳಿದ್ದು, ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಕೇಳಿದ್ದು ತಪ್ಪಾಯಿತು. ಕಡತದಿಂದ ನಮ್ಮ ಅಭಿಪ್ರಾಯಗಳನ್ನು ತೆಗೆದು ಹಾಕಲಾಯಿತು. ಈ ಕುರಿತು ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸುವ ತಂತ್ರ ಹೆಣೆಯಲಾಯಿತು ಎಂದು ಅವರು ಆರೋಪಿಸಿದರು.
ದಲಿತ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಗುಜರಾತ್ ಸಂಸದ ನರನ್ ಕಚಾಡಿಯಾ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 3 ವರ್ಷ 10 ತಿಂಗಳು ಜೈಲು ಶಿಕ್ಷೆ ಪ್ರಕಟಿಸಿತ್ತು. ವಿವಿಧ ಹಂತಗಳಲ್ಲಿ ಈ ಪ್ರಕರಣ ಸುಪ್ರೀಂ ಕೋರ್ಟ್ ತಲುಪಿತ್ತು. ಸುಪ್ರಿಂ ಕೋರ್ಟ್ ಕೂಡ ಸಂಸದರ ತಪ್ಪುಅನ್ನು ಎತ್ತಿಹಿಡಿಯುತ್ತದೆ. ಆದರೆ ಅಲ್ಲಿಯ ತನಕವೈ ಬಿಜೆಪಿ ಆ ಸಂಸದರನ್ನು ಪಾರ್ಲಿಮೆಂಟ್‌ನಿಂದ ಅನರ್ಹಗೊಳಿಸದ ಮೋದಿ ಸರ್ಕಾರ, ರಾಹುಲ್ ಗಾಂಧಿ ಅವರಿಗೆ 24 ಗಂಟೆಯೊಳಗೆ ಅನರ್ಹತೆಯ ನೋಟಿಸ್ ಕಳುಹಿಸುತ್ತದೆ. ಈ ಸರ್ಕಾರ ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಎಂಎಲ್ಸಿ ಐವನ್ ಡಿಸೋಜ, ಕೆಪಿಸಿಸಿ ಕಾರ್ಯದರ್ಶಿ ಆರ್.ಪದ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.