ಆಚಾರದಂತೆ ವಿಚಾರ.. ವಿಚಾರದಂತೆ ಸಂಸ್ಕಾರ

Advertisement

ಜನ್ಮತಃ ರಾಜಕುಮಾರಿಯಾದ ರೇಣುಕಾ ಯಲ್ಲಮ್ಮ ಯೋಗಾಯೋಗದಿಂದ ಜಮದಗ್ನಿ ಮುನಿಯ ಧರ್ಮಪತ್ನಿಯಾಗಿದ್ದಳು. ಪ್ರತಿದಿನ ತನ್ನ ಪಾತಿವ್ರತ್ಯ ಶಕ್ತಿಯಿಂದ ಉಸುಕಿನ ಬಿಂದಿಗೆ ಮಾಡಿ ಹಾವನ್ನು ಸಿಂಬೆ ಮಾಡಿಕೊಂಡು ಬ್ರಾಹ್ಮಿ ಮುಹೂರ್ತದಲ್ಲಿ ಋಷಿಗಳ ಪೂಜೆಗೆ ಮಡಿ ನೀರು ತರುತ್ತಿದ್ದಳು. ಒಂದು ದಿನ ಹೀಗೆ ಮಡಿನೀರು ತರಲು ನದಿಗೆ ಹೋದಾಗ ನದಿಯ ಆಚೆ ದಡದಲ್ಲಿ ಗಂಧರ್ವ ದಂಪತಿ ಈರ್ವರು ಜಲಕ್ರೀಡೆ ಆಡುತ್ತಿದ್ದರು. ಅದನ್ನು ನೋಡಿದ ಮೂಲತಹ ರಾಜಕುಮಾರಿಯಾದ ರೇಣುಕಾ ಎಲ್ಲಮ್ಮ ನಾನು ಋಷಿಯನ್ನು ಮದುವೆಯಾಗುವುದಕ್ಕೆ ಬದಲಾಗಿ ಯಾವುದಾದರೂ ಒಬ್ಬ ರಾಜಕುಮಾರನನ್ನು ಮದುವೆಯಾಗಿದ್ದರೆ ಇವರಂತೆ ನಾನೂ ಜಲಕ್ರೀಡೆ ಆಡಬಹುದಿತ್ತು ಎಂಬ ವಿಚಾರ ಕೇವಲ ಒಂದು ಸಾರಿ ಅವಳ ಮನಸ್ಸಿನಲ್ಲಿ ಬಂದು ಹೋಗುತ್ತದೆ.
ಅವಳ ಮನಸ್ಸಿನಲ್ಲಿ ಕೇವಲ ಒಂದು ಬಾರಿ ಬಂದು ಹೋದ ಈ ಪಾಪ ವಿಚಾರದ ಪರಿಣಾಮವಾಗಿ ಅವಳ ಪಾತಿವ್ರತ್ಯ ಭಂಗವಾಗುತ್ತದೆ. ಉಸುಕು ಬಿಂದಿಗೆ ಆಗುವುದಿಲ್ಲ. ಹಾವು ಸಿಂಬೆಯಾಗುವುದಿಲ್ಲ. ಕೊನೆಗೆ ಋಷಿಗಳಿಂದ ಕುಷ್ಟರೋಗಿಯಾಗುವ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಕಾರ್ಯರೂಪಕ್ಕೆ ಬರುವ ಪಾಪಗಳಷ್ಟೇ ಅನಿಷ್ಟವನ್ನು ಕೇವಲ ವಿಚಾರದಲ್ಲಿ ಒಡಮೂಡುವ ಪಾಪಗಳು ಕೂಡ ಉಂಟುಮಾಡುತ್ತವೆ. ಆದ್ದರಿಂದ ಇತರರಿಗೆ ತೋರುವ ಆಚರಣೆಯಲ್ಲಿ ಮಾತ್ರ ಎಚ್ಚರಿಕೆಯಿದ್ದರೆ ಸಾಲದು. ಇತರರಿಗೆ ಕಾಣದಿರುವ ನಮ್ಮ ಮನಸ್ಸಿನಲ್ಲಿ ಬರುವ ವಿಚಾರಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಮನಸ್ಸು ಸೂಕ್ಷö್ಮವಾದದ್ದು, ಅದು ಮರ್ಕಟವೆಂದೂ ಹೇಳಲಾಗಿದೆ. ಹೀಗಾಗಿ ಅನೇಕ ವಿಚಾರಗಳನ್ನು ಸರಿದಾರಿಯಲ್ಲಿ ಆಲೋಚಿಸದೇ ಮನಸ್ಸು ವಿಕಾರ ರೂಪದಲ್ಲಿ ಆಲೋಚನೆಗೆ ಮುಂದಾಗುತ್ತದೆ. ಹಾಗೇ ಮನಸ್ಸಿನಿಂದಲೂ ನಮಗೆ ಪಾಪಗಳು ಲೇಪಿಸಿಕೊಳ್ಳುತ್ತವೆ. ಮನಸ್ಸು ಮೈಲಿಗೆಯಾದರೆ ಮಸ್ತಕ ಕೊಳಕಾಗುತ್ತದೆ. ಶುದ್ಧ ಕಾಯಕದಿಂದ ಶುದ್ಧ ಮನಸ್ಸು ಬರುತ್ತದೆ. ಒಳ್ಳೆಯ ಧನಾತ್ಮಕ ಆಲೋಚನೆಯಿಂದ ನಮ್ಮನ್ನು ನಾವೆ ನಿಗ್ರಹಿಸಿಕೊಳ್ಳಬೇಕು. ಹೀಗೆ ನಿಯಂತ್ರಿಸಿಕೊಳ್ಳುವದೇ ಸಂಸ್ಕಾರವೂ ಆಗುತ್ತದೆ. ತನ್ನ ಸಾಧನೆಗೂ ಅಡ್ಡಿಯಾಗುವ ವಿಚಾರಗಳು ಮತ್ತು ಮತ್ತೊಬ್ಬರ ಕುರಿತಂತೆ ವಿಷಯುಕ್ತ ವಿಚಾರಗಳು ಕೂಡ ಪಾಪದ ವಿಚಾರಗಳಾಗಿವೆ. ಆದುದರಿಂದ ಪಾಪದ ವಿಚಾರಗಳು ಮನದಲ್ಲಿಯೂ ಸುಳಿಯದಂತೆ ನೋಡಿಕೊಳ್ಳಬೇಕು.