ಆತ್ಮಸಾಕ್ಷಿಗೆ ಜೈ-ಎಲ್ಲರಿಗೂ ಬೈ

Advertisement

ಇಷ್ಟರಲ್ಲಿಯೇ ತಿಗಡೇಸಿ ಹೊಸ ರಾಜಕೀಯ ಪಕ್ಷ ಕಟ್ಟಲು ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾನೆ. ಎಷ್ಟು ಪಕ್ಷಗಳಿವೆಯೋ ಅಷ್ಟೂ ಪಕ್ಷ ತಿರುಗಾಡಿ ಬಂದಿರುವ ಆತನಿಗೆ ಇನ್ನು ನನ್ನದೇ ಆದಂತಹ ಹೊಸಪಕ್ಷ ಕಟ್ಟಿ ಅದರ ಮೂಲಕ ರಾಜಕೀಯ ಮಾಡಿದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಎಲ್ಲ ಪಕ್ಷಗಳ ಹೆಸರುಗಳಂತೆ ನನ್ನ ಪಕ್ಷಕ್ಕೆ ಹೆಸರಿಟ್ಟರೆ ಅದೂ ಹತ್ತರ ಜತೆ ಹನ್ನೊಂದು ಆಗಿಬಿಡುತ್ತದೆ ಎಂದು ಯೋಚನೆ ಮಾಡಿ ಯಳ್ಳಮವಾಸ್ಯೆ ಮರುದಿನ ಎಲ್ಲ ಸಮಾನ ಮನಸ್ಕರ ಸಭೆ ಕರೆದ. ಸಭೆಗೆ ಬಂದವರಿಗೆಲ್ಲ…… ಫ್ರೀ ಎಂದು ಹಾಕಿಸಿದ್ದರಿಂದ ನಿರೀಕ್ಷೆಗೂ ಮೀರಿ ಜನ ಸೇರಿದರು. ಮೊದಲಿಗೆ ಭಾಷಣ ಮಾಡುತ್ತ…ನೋಡಿ ಇವತ್ತು ನೀವು ಎಲ್ಲ ಪಕ್ಷದವರನ್ನು ನೋಡಿಬಿಟ್ಟಿದ್ದೀರಿ…. ಎಲ್ಲರ ಹಣೆಬರಹ ಒಂದೇ..ಅವರು ಅಪ್ಪ-ಇವರು ಚಿಕ್ಕಪ್ಪ. ಹಾಗಾಗಿ ಯಾವ ಪಕ್ಷ ಹೇಗೆ ಎಂದು ನಿಮಗೇ ಗೊತ್ತಿದೆ. ಇವುಗಳನ್ನೆಲ್ಲ ನೋಡಿ… ನೋಡಿ ನನಗೆ ಸಾಕಾಗಿ ಹೋಗಿ ಇದೀಗ ನಾನು ಹೊಸಪಕ್ಷ ಕಟ್ಟಿ ಅದಕ್ಕೆ ಆತ್ಮಸಾಕ್ಷಿಪಕ್ಷ ಎಂದು ಹೆಸರಿಡಬೇಕು ಅಂದಿದ್ದೇನೆ. ನೀವೆಲ್ಲ ನನ್ನ ಪಕ್ಷದಲ್ಲಿದೀರಾ ಎಂದು ಕೇಳಿದ್ದಕ್ಕೆ ಅರ್ಧ ಜನ ಹೋ ಎಂದು ಕೈ ಎತ್ತಿದರು. ಇನ್ನರ್ಧ ಜನರು ಸುಮ್ಮನೇ ಕುಳಿತಿದ್ದರು. ಕೈ ಎತ್ತಿದವರಿಗೆ ಆತ್ಮಸಾಕ್ಷಿ ಇದೆ. ಕೈ ಎತ್ತದವರಿಗೆ ಇಲ್ಲ ಎಂದು ತಿಳಿದುಕೊಳ್ಳುತ್ತೇನೆ ಎಂದು ಹೇಳಿದಾಗ… ಅವರೆಲ್ಲ ಸಟಕ್ಕನೇ ಕೈ ಮೇಲೆ ಎತ್ತಿದರು. ಖುಷಿಯಾದ ತಿಗಡೇಸಿ ನಿಮ್ಮಲ್ಲಿ ಏನಾದರೂ ಪ್ರಶ್ನೆ ಇದ್ದರೆ ಕೇಳಿ ಎಂದು ಹೇಳಿದ… ಸಭಿಕರು ಗುಸುಗುಸು ಆರಂಭಿಸಿದರು. ಮೇಕಪ್ ಮರೆಮ್ಮ ಯಾರದ್ದೋ ಕಿವಿಯಲ್ಲಿ ಏನೋ ಹೇಳುತ್ತಿದ್ದಳು.
ಅಷ್ಟರಲ್ಲಿ ತಳವಾರ್ಕಂಟಿ-ಕನ್ನಾಲ್ಮಲ್ಲ ಇಬ್ಬರೂ ಎದ್ದು ನಿಂತು…ಅಲ್ಲ ತಿಗಡೇಸಿ ಅವರೇ… ಎಷ್ಟೊಂದು ಹೆಸರುಗಳಿದ್ದವು ಎಲ್ಲ ಬಿಟ್ಟು ತಾವು ನಿಮ್ಮ ಪಕ್ಷಕ್ಕೆ ಆತ್ಮಸಾಕ್ಷಿ ಎಂದು ಹೆಸರಿಟ್ಟಿರಿ ಅಂದಾಗ..ತಿಗಡೇಸಿಯು ಗುಡ್‌ಕ್ವಶ್ಚನ್.. ಗುಡ್‌ಕ್ವಶ್ಚನ್ ಎಂದು ಹೇಳುತ್ತ ಗಂಟಲು ಸರಿಮಾಡಿಕೊಂಡು… ನೋಡಿ ಇವರೇ… ನಿನ್ನೆ ಓಟು ಹಾಕಿ ಬಂದವರು… ಯಾರಿಗೆ ಮತ ಹಾಕಿದೆ ಎಂದಾಗ ಅವರು.. ಆತ್ಮಸಾಕ್ಷಿ.. ಆತ್ಮಸಾಕ್ಷಿ ಎಂದು ಹೇಳುತ್ತಿದ್ದರು. ಈವರೆಗೂ ಅಂತಹ ಪಕ್ಷ ಎಲ್ಲಿಯೂ ಇಲ್ಲ.
ಮನುಷ್ಯನ ಆತ್ಮಸಾಕ್ಷಿ ಮುಂದೆ ಯಾವುದೇ ಇಲ್ಲ. ಅದಕ್ಕಾಗಿ ನಾನು ಪಕ್ಷಕ್ಕೆ ಆತ್ಮಸಾಕ್ಷಿ ಎಂದು ಹೆಸರಿಡಲು ಮುಂದಾಗಿದ್ದೇನೆ. ನಾಳೆ ಚುನಾವಣೆ ಬಂದಾಗ.. ನೋಡಿ ಇವರೇ.. ನಿಮಗೆ ಆತ್ಮಸಾಕ್ಷಿ ಇದ್ದರೆ ನಮ್ಮ ಪಕ್ಷಕ್ಕೆ ಮತ ಹಾಕಿ ಎಂದರೆ ಹಾಕೇ ಹಾಕುತ್ತಾರೆ…. ರಾಜ್ಯದಲ್ಲಿ ಶೀಘ್ರದಲ್ಲಿಯೇ ನಮ್ಮ ಆತ್ಮಸಾಕ್ಷಿ ಉದಯವಾಗಲಿದೆ ನಿಮ್ಮೆಲ್ಲರ ಬೆಂಬಲ ಆತ್ಮಸಾಕ್ಷಿಗೆ ಇರಲಿ ಎಂದು ದೊಡ್ಡದಾಗಿ ಕೈ ಮುಗಿದ ಕೆಲವರು ಆತ್ಮಸಾಕ್ಷಿಗೆ ಜೈ-ಎಲ್ಲರಿಗೂ ಬೈ ಎಂದು ಕೂಗುತ್ತ ಹೋದರು.