ಆದಿಲ್ ಪ್ರಕರಣ ಸಿಐಡಿಗೆ ವರ್ಗಾವಣೆ ಸಾಧ್ಯತೆ: ಎಸ್ಪಿ

Advertisement

ದಾವಣಗೆರೆ: ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಚನ್ನಗಿರಿ ಪೊಲೀಸ್ ಠಾಣೆಗೆ ಕರೆ ತಂದಿದ್ದ ಆದಿಲ್‌ ಸಾವಿನ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆದಿಲ್ ಸಾವಿನ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗಳು ನಡೆದಿದ್ದು, ಪ್ರಕರಣ‍ವು ಸಿಐಡಿಗೆ ವರ್ಗಾವಣೆಯಾಗಲಿದೆ ಎಂದರು.

ಆದಿಲ್ ಸಾವಿನ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಸಮುದಾಯದವರು ಶವವನ್ನು ಠಾಣೆಯಲ್ಲಿಟ್ಟು, ಪ್ರತಿಭಟಿಸಿದ್ದು, ಕೆಲ ಉದ್ರಿಕ್ತರು ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಸರ್ಕಾರಿ ಸ್ವತ್ತು ಧ್ವಂಸ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರನ್ನು ಗಾಯಗೊಳಿಸಿದ್ದು ಸೇರಿದಂತೆ 4 ಪ್ರಕರಣದಲ್ಲಿ ಈವರೆಗೆ 24 ಜನರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅವರು ತಿಳಿಸಿದರು.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ವಿರುದ್ಧ ಹಿಂದೆ ಯಾವುದೇ ಹಳೆಯ ಕೇಸ್‌ಗಳು ಇಲ್ಲ. ಗುಂಪಿನಲ್ಲಿ ಕೆಲ ಯುವಕರು ಇಂತಹ ವರ್ತನೆ ತೋರಿದ್ದಾರೆ. ಚನ್ನಗಿರಿ ಪಟ್ಟಣ, ಹೊನ್ನೆಬಾಗಿ, ನಲ್ಲೂರು ಸೇರಿದಂತೆ ವಿವಿಧ ಹಳ್ಳಿಗಳಿಂದ ಬಂದಿದ್ದ ಯುವಕರು ಗುಂಪಿನಲ್ಲಿದ್ದರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 353 ಮತ್ತು 307 ಪ್ರಕರಣ ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

ಮೃತ ಆದಿಲ್‌ನ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ವರದಿ ಇನ್ನೂ ನಮ್ಮ ಕೈಸೇರಿಲ್ಲ. ಇನ್ನು 2-3 ದಿನಗಳಲ್ಲೇ ಆದಿಲ್‌ನ ಶವದ ಮರಣೋತ್ತರ ಪರೀಕ್ಷೆಯ ವರದಿಯು ಕೈಸೇರುವ ಸಾಧ್ಯತೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.