ಆರೋಪದ ಬಗ್ಗೆ ಸಿದ್ದರಾಮಯ್ಯರನ್ನ ಆಣೆ ಮಾಡಲು ಧರ್ಮಸ್ಥಳಕ್ಕೆ ಆಹ್ವಾನಿಸಿದ ಭೈರತಿ ಬಸವರಾಜ್!

Advertisement

ದಾವಣಗೆರೆ: ನಾನು ಪರ್ಸಂಟೇಜ್ ಪಡೆದಿರುವುದನ್ನು ಕಾಂಗ್ರೆಸ್‌ನವರು ಸಾಬೀತು ಪಡಿಸಿದರೆ ನಾನು ಇಂದೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸವಾಲು ಹಾಕಿದ್ದಾರೆ.
ಹಣ, ಸಚಿವ ಸ್ಥಾನಕ್ಕೆ ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ, ನಾನು ೪೦ ಪರ್ಸೆಟೇಂಜ್ ಹಣ ಪಡೆದಿಲ್ಲ ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿಜಿಯ ಮೇಲೆ ಆಣ ಮಾಡುತ್ತೇನೆ. ಅವರು ಬಂದು ಪಡೆದಿರುವ ಬಗ್ಗೆ ಆಣೆ ಮಾಡಲಿ ನೋಡೋಣ ಎಂದು ಬಹಿರಂಗ ಪಂಥಾಹ್ವಾನ ನೀಡಿದರು.
ನಾನು ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದೇನೆ. ಯಾವುದೇ ಹಣ ಮಾಡಲು ಅಥವಾ ಸಚಿವ ಸ್ಥಾನಕ್ಕಾಗಿ ಅಲ್ಲ. ನಾವು ಯಾವುದೇ ಆಮಿಷಗಳಿಗೆ ಹೋಗುವ ಜಾಯಮಾನದವರಲ್ಲ. ನಾವು ಸ್ವಾಭಿಮಾನಕ್ಕೆ ಪಕ್ಷವನ್ನ ಬಿಟ್ಟಿದ್ದು ಅದು ಎಲ್ಲರಿಗೂ ಗೊತ್ತಿದೆ ಜತೆಗೆ ಅವರಿಗೂ ಗೊತ್ತಿದೆ, ಈ ತರ ಮಾತನಾಡೋದು ಎಷ್ಟು ಸಮಂಜಸ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ಬರೀ ಸುಳ್ಳು ಹೇಳಕೊಂಡು ರಾಜಕಾರಣ ಮಾಡೋಕೆ ಹೊರಟಿದ್ದಾರೆ. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ೨೦೦ ಯುನಿಟ್ ಫ್ರೀ ವಿದ್ಯುತ್ ಕೊಡುವುದಾಗಿ ಹೇಳುತ್ತಾರೆ. ಇದನ್ನು ಅವರು ಅಧಿಕಾರದಲ್ಲಿದ್ದಾಗ ಯಾಕೆ ಕೊಡಲಿಲ್ಲ? ಎಲ್ಲವನ್ನ ಉಚಿತವಾಗಿ ಕೊಡ್ತೀನಿ ಅಂದ್ರೆ ಈಡೀ ರಾಜ್ಯನೆ ಕೇಳ್ತಾರೆ ಕೊಡೊಕೆ ಆಗುತ್ತಾ? ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನ ಉಚಿತವಾಗಿ ಕೊಡ್ತರಾ..? ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.