ಆಲದಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ

Advertisement

ಶ್ರೀರಂಗಪಟ್ಟಣ: ತಾಲ್ಲೂಕಿನ ಆಲದಹಳ್ಳಿ ಬಸವೇಶ್ವರ ದೇವಾಲಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ರಾತ್ರಿ ಅರುಣೋದಯ ಕಲಾ ತಂಡ ಆಯೋಜನೆ ಮಾಡಿದ್ದ ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜನೆ ಮಾಡಲಾಗಿತ್ತು.
ಶ್ರೀರಂಗಪಟ್ಟಣ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಕನಕದಾಸ ಹಾಗೂ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಅಭಿಮಾನ ಕೇವಲ ನವಂಬರ್ ಮಾಸಕ್ಕೆ ಮೀಸಲಾಗದೆ ವರ್ಷಪೂರ್ತಿ ನಿತ್ಯೋತ್ಸವವಾಗಿ ಆಚರಿಸುವಂತಾಗಬೇಕು. ದಾಸ ಶ್ರೇಷ್ಠರಾದ ಕನಕದಾಸರು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಪ್ರಸ್ತುತ ಅರುಣೋದಯ ಕಲಾ ತಂಡ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಿ ಎಲ್ಲರ ಮನೆ ಹಾಗೂ ಮನಸ್ಸಿನಲ್ಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅರುಣೋದಯ ಕಲಾ ತಂಡದ ಅಧ್ಯಕ್ಷೆ ಮಂಜುಳಾ ಪ್ರಸ್ತಾವಿಕವಾಗಿ ಮಾತನಾಡಿ, ಮಂಡ್ಯ ಜಿಲ್ಲೆ ಇಡೀ ರಾಜ್ಯಕ್ಕೆ ಹೆಚ್ಚು ಕನ್ನಡ ಭಾಷೆಯನ್ನು ಮಾತನಾಡಿ ಪೋಷಿಸುವಂತಹ ಹೃದಯವಂತಿಕೆ ಹಾಗೂ ಸಂಸ್ಕಾರವನ್ನು ಹೊಂದಿರುವಂತಹ ಪುಣ್ಯಭೂಮಿ. ಜೊತೆಗೆ ಹಲವು ಹೋರಾಟಗಾರರಿಗೆ ಈ ಸ್ಥಳದಲ್ಲಿ ಜನ್ಮ ನೀಡಿದೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಸ್ವಾಭಿಮಾನ ಬಿಟ್ಟುಕೊಡದೆ ಹೋರಾಟದ ಕಿಚ್ಚನ್ನು ಹಚ್ಚಿ ಭಾಷೆಯ ಸೊಗಡನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿರರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ , ಕಲಾವಿದ ಹುರುಗಲವಾಡಿ ರಾಮಯ್ಯ ಮಾತನಾಡಿದರು. ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ದರಸುಗುಪ್ಪೆ ಧನಂಜಯ, ಕಲಾವಿದರಾದ ರಾಜೇಶ, ನಾಗಯ್ಯ,ನಾಗಣ್ಣ,ಧನಂಜಯ ಚಿಕ್ಕಪ್ಪಾಜಿ,ನಟರಾಜು,ವೆಂಕಟೇಶ್ ಹಾಗು ರತ್ಮಮ್ಮ ಸೇರಿದಂತೆ ಇತರರು ಹಾಜರಿದ್ದರು. ಇದೇ ಸಂಧರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಗ್ರಾಮದ ಯೋಧ ಮಂಜು , ಪರಿಸರ ಸಂರಕ್ಷಣೆಯಲ್ಲಿ ಸುಮಾರು 3500ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟು , ಪೋಷಿಸುತ್ತಿರುವ ಪರಿಸರ ಪ್ರೇಮಿ ರಮೇಶ್, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮಧ್ಯಾಹ್ನದ ಉಪಹಾರದ ಜೊತೆಗೆ ಎನ್ಎಂಎಂಎಸ್ ಹಾಗೂ 10ನೇ ತರಗತಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಮಾರ್ಗದರ್ಶನ ನೀಡಿ ಬಹುಮುಖ ಪ್ರತಿಭೆಯಾಗಿ ಸಮಾಜ ಸೇವೆ ಮಾಡುತ್ತಿರುವ ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಕನ್ನಡ ನಾಡು, ನುಡಿ ಬಿಂಬಿಸುವಂತಹ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರ ಗಮನಸೆಳೆಯಿತು.