ಆಳುವ ದೊರೆಯೇ ಇದು ನಿನಗೆ ಸರಿಯೇ?

Advertisement

ಕೈ ಕಮಲೇಸಿ ಗ್ಯಾಂಗಿನ ಸಹಯೋಗದಲ್ಲಿ ನಡೆಸಲುದ್ದೇಶಿಸಿರುವ ಬಿಟ್ರೆ ಕೆಟ್ಟಿ ಎಂಬ ಸುಂದರ ಅರ್ಧ ಪೌರಾಣಿಕ…ಅರ್ಧ ಸಾಮಾಜಿಕ ನಾಟಕದಲ್ಲಿ ಪಾತ್ರ ಮಾಡಿರುವಂತಹ ನಟ ಭಯಂಕರ ಮದ್ರಾಮಣ್ಣನವರು-ಸರ್ವಸಂಪನ್ನ ನಟ ಬಿರುದಾಂಕಿತ ಗುಮ್ಮಾಯಿ ಗುಸ್ಸಣ್ಣನವರು ತಾಲೀಮಿನಲ್ಲಿ ಹೇಳಿದ ಡೈಲಾಗ್‌ಗಳು ಎಲ್ಲೆಡೆ ಫೇಮಸ್ ಆಗಿವೆ. ತಾಲೀಮಿನಲ್ಲಿ ಗದೆ ಇಲ್ಲದಿದ್ದರೂ ಗದೆ ಎತ್ತಿದಂತೆ ನಟನೆ ಮಾಡಿ… ನಾನಾರು… ಮೊದಲೇ ಮದ್ರಾಮಣ್ಣ… ನಾನು ಎಕನಾಮಿಕ್ಸು.. ಪೊಲಿಟಿಕ್ಸನ್ನು ಬಾಲವಾಡಿಯಿಂದಲೇ ಓದಿದವ. ಈ ವಿಷಯದಲ್ಲಿ ನನ್ನ ಮೀರಿಸುವ ಗಂಡು ಇನ್ನೂ ಹುಟ್ಟಿಲ್ಲ. ಮುಂದೂ ಹುಟ್ಟುವುದಿಲ್ಲ… ಬೇಕಾದರೆ ನೋಡುತಿರಿ ಅನುತಿರಲು.. ನಾಟಕ ಕಂಪನಿಯ ಹಾರ್ಮೋನಿಯಂ ಮಾಸ್ತರ್ ಬ್ಯೂಟಿ ನಾಡರ್.. ಅದು ಆಗಲ್ಲ… ಚುಮ್ನೆ ಕುಳಿತುಕೊಳ್ಳಿ ಎಂದು ಹೇಳಿದಾಗ… ಇಬ್ಬರೂ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದರು.. ಗುಮ್ಮಾಯಿ ಅವರು… ಅಯ್ಯೋ ನೀವೇನೂ ನೋಡಿದ್ದೀರಿ… ಜನರೆಲ್ಲ ಏನಿಲ್ಲ… ಏನಿಲ್ಲ ಅಂತಿದಾರೆ… ನಮ್ಮನ್ನಾಳುವ ದೊರೆಯೇ… ನೀನು ಹೀಗೆ ಮಾಡುವುದು ಸರಿಯೇ…? ಕೊಟ್ಟ ಬೈಕನು ಏರದವನು…. ಡ್ರೈವರ‍್ರೂ ಅಲ್ಲ ಕಂಡಕ್ರ‍್ರೂ ಅಲ್ಲ. ಬಾ… ಬಾ… ದುಡ್ಡು ಕೊಡ್ತೀವಿ ಬಾಬಾ… ಅಂದರೆ ನೀವು ಒಲ್ಲೆ… ನಾನೊಲ್ಲೇ… ಎಂದು ಸೋಗು ಮಾಡಿದಿರಿ… ನನ್ನಂಥವನು ಆಗಿದ್ದಿದ್ದರೆ…. ಕೊಡಿ.. ಕೊಡಿ… ಎಂದು ಉಳಿದವರನ್ನು ಮನೀಗೆ ನಡಿ ಎಂದು ಹೇಳುತ್ತಿದ್ದೆ… ಕೊಟ್ಟದ್ದು ಇಸಿದುಕೊಳ್ಳದಿದ್ದರೆ ನೀವು ಯಾರ ಮಗುವಾದರೇನು? ಎಂದು ಗಂಟಲು ಹರಿಯುವ ಹಾಗೆ ಜೋರಾಗಿ ಅನ್ನ ತೊಡಗಿದರು. ಇದನ್ನೆಲ್ಲ ಮನೆಯಲ್ಲಿ ಕುಳಿತು ಟಿವಿಯಲ್ಲಿ ನೋಡುತ್ತಿದ್ದ ಸಿಟ್ಯೂರಪ್ಪನವರು… ಸೀದಾ ಲೇವೇಗೌಡರಿಗೆ ಕಾಲ್ ಮಾಡಿ ನೋಡಿದಿರಾ… ನೋಡಿದಿರಾ…? ಎಂದಾಗ… ಏನೋ ಏನಪ್ಪ… ನನಗೆ ಒಂದೂ ಅರ್ಥವಾಗಿಲ್ಲ… ಅದೆಲ್ಲ ಇರಲಿ… ನಮ್ಮ ಲೇವಣ್ಣಿಗೊಂದೂ ಪಾತ್ರವಿಲ್ಲವಲ್ಲ? ಅವನೂ ಸಹ ಒಳ್ಳೆಯ ನಟ… ನೀವು ಅವನ ನಟನೆ ನೋಡಿದ್ದೀರಿ…ನಾಟಕದ ಮೇಸ್ಟ್ರು ಬ್ಯೂಟಿಗೂ ನಾನು ಹೇಳಿದ್ದೇನೆ. ಅದಿರಲಿ… ಮದ್ರಾಮಣ್ಣನವರ ಪಾತ್ರ ಮೊದಲಿನ ಹಾಗೆ ಇಲ್ಲ ಅನಿಸುತ್ತದೆ.. ಗುಮ್ಮಾಯಿ ಅವರೂ ಸಹ ಯಾಕೋ ಮೆತ್ತಗೆ ಮಾತನಾಡುತ್ತಿದ್ದಾರೆ… ಅದೇನೇ ಇರಲಿ ಬುಡಿ… ತಾಲೀಮು ಚೆನ್ನಾಗಿಯೇ ನಡೀತಿದೆ. ನಿಜವಾಗಿ ಜಗಳ ಹತ್ತಿದರೂ ಹತ್ತಲಿ… ನೀವು ಮಧ್ಯೆ ಹೋಗಬೇಡಿ ಆಯಿತಾ.. ಬಾಯ್.. ಬಾಯ್ ಎಂದರು.. ಸಿಟ್ಯೂರಪ್ಪ ಅದೇ ಸಾರ್ ಬಾಯಿ ಮಾಡ್ತಾ ಇದಾರೆ ಎಂದು ಹೇಳುತ್ತಿದ್ದಂತೆ ಲೇವೇಗೌಡರು ಫೋನ್ ಕಟ್ ಮಾಡಿದರು.