‘ಆಳ್ವಾಸ್ ವಿರಾಸತ್-2023’ಕ್ಕೆ ವೈಭವದ ಚಾಲನೆ

Advertisement

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಆಳ್ವಾಸ್ ಸಂಸ್ಥೆಯು ಎಲ್‌ಕೆಜಿಯಿಂದ ಪಿ.ಜಿ.ವರೆಗಿನ ಶಿಕ್ಷಣವನ್ನು ನೀಡುವುದಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತಾ ಬರುತ್ತಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಸಂಸ್ಥೆ ಎಂದು ನಿರೂಪಿಸಿದೆ ಇದಕ್ಕೆ ಪೂರಕವೆಂಬಂತೆ ರಾಜ್ಯದಿಂದ ಮೆಚ್ಚುಗೆಯೂ ಸಿಕ್ಕಿದೆ ಎಂದರು.
ಕಳೆದ 28 ವರ್ಷಗಳಿಂದಲೂ ವಿರಾಸತ್‌ನ ವೇದಿಕೆಯಲ್ಲಿ ಭಾಗವಹಿಸುತ್ತಿರುವ ಪದ್ಮವಿಭೂಷಣ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅಮೂಲ್ಯ ಸಂಪತ್ತು ಇರುವುದು ದೇಶದ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮನೋರಂಜನೆ ಮಾತ್ರ ಅಲ್ಲ ಜ್ಞಾನ ಜಾತ್ರೆ ಮತ್ತು ಜ್ಞಾನ ಯಾತ್ರೆ ನಡೆಯುತ್ತಿದೆ ಎಂದು ಹೇಳಿದರು. ಸಾಂಸ್ಕೃತಿಕ ಯಜ್ಞವನ್ನು ಮಾಡುವ ಮೂಲಕ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಇಂದು ನಮ್ಮ ದೇಶ ಕನ್ನಡದ ಬಡ ರಾಷ್ಟ್ರವಲ್ಲ ಹಿಂದಿಯ ಬಡಾ ರಾಷ್ಟ್ರವಾಗಿ ಬೆಳೆದಿದೆ.
ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಡಿಗ್ರಿ, ಉದ್ಯೋಗ ಸಿಗಬಹುದು ಆದರೆ ಇಲ್ಲಿ ಅದೆಲ್ಲವುಗಳ ಜತೆಗೆ ಅದ್ಭುತ ಸಾಧನೆಗೆ ಪ್ರಶಂಸೆಯೂ ಸಿಗುತ್ತಿದೆ. ಡಾ.ಆಳ್ವರು ವಿವಿಧ ರೀತಿಯ ಏಳು ಯಜ್ಞಗಳನ್ನು ಮಾಡುವ ಮೂಲಕ ವಿಶೇಷವಾದ ಕೊಡುಗೆಯನ್ನು ನೀಡುತ್ತಿದ್ದಾರೆಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಎ.ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಾಜಿ ಸಚಿವ ಅಭಯಚಂದ್ರ ಜೈನ್, ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಎಂಜಿಆರ್ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಪ್ರಸನ್ನ ಶೆಟ್ಟಿ ಬೆಂಗಳೂರು, ರವೀಂದ್ರನಾಥ ಆಳ್ವ ಮಂಗಳೂರು, ರವಿಶಂಕರ್ ಶೆಟ್ಟಿ ಬಂಟ್ವಾಳ, ಮುಸ್ತಫಾ ಎಸ್.ಎಂ, ಪ್ರವೀಣ್ ಕುಮಾರ್,ಕೆ. ಶ್ರೀಪತಿ ಭಟ್ ಮೂಡುಬಿದಿರೆ, ಪ್ರಮುಖರಾದ ಜಯಶ್ರೀ ಅಮರನಾಥ ಶೆಟ್ಟಿ ಮೂಡುಬಿದಿರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಬಾರಿಯ ವಿರಾಸತನ್ನು ವೀರ ಮರಣವನ್ನಪ್ಪಿದ ಯೋಧ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.