ಇಂಥವರ ಸ್ನೇಹ ಮಾಡು

Advertisement

ಯಾರ ವ್ಯಕ್ತಿತ್ವದಲ್ಲಿ ಮಾಲಿನ್ಯವಿರುತ್ತದೋ, ಅಂಥವನ ಸ್ನೇಹ ಮಾಡಬಾರದು. ಮೂರ್ಖನಾದವನ ಜೊತೆ ಸ್ನೇಹ ನಿಷಿದ್ಧ. ಭಯಂಕರವಾಗಿ ಸಾಹಸ ಮಾಡುವವನ ಜೊತೆ ಮಾಡುವ ಸ್ನೇಹ ಅಪಾಯಕರ.
ಯಾರು ಸದಾಚಾರ ಸದ್ವಿಚಾರ ಮೊದಲಾದ ಧರ್ಮಗಳಿಂದ ರಹಿತರಾಗಿರುತ್ತಾರೋ, ಅಂಥವರ ಜೊತೆ ಮಾಡುವ ಸ್ನೇಹವು ಧರ್ಮಕ್ಕೆ ವಿರುದ್ಧ. ಬುದ್ಧಿವಂತನಾದವನು ಈ ಎಲ್ಲರ ಸ್ನೇಹವನ್ನು ಪರಿತ್ಯಾಗ ಮಾಡಿ, ಸಜ್ಜನ ಎನಿಸಿದವನ ಸ್ನೇಹವನ್ನಷ್ಟೇ ಮಾಡಬೇಕು.
ಕರ್ತವ್ಯನಿರತನಾಗು: ಕರ್ತವ್ಯದಲ್ಲಿ ನಿರತನಾದವನು ಯಾವುದರಿಂದಲೂ ವಿಮುಖನಾಗಬಾರದು. ಕೋಪ, ಸಂತೋಷ, ಅಹಂಕಾರ, ನಾಚಿಕೆ, ಸ್ತಬ್ಧತೆ, ಸನ್ಮಾನ ಈ ಯಾವುದರಿಂದಲೂ ಕರ್ತವ್ಯವನ್ನು ಪರಿತ್ಯಾಗ ಮಾಡಬಾರದು. ಆಗ ಮಾತ್ರ ಅವನನ್ನು ಪಂಡಿತ ಎಂದು ಕರೆಯುತ್ತಾರೆ.
ಯಾವುದನ್ನೂ ತಿರಸ್ಕರಿಸಬೇಡ: ಎಷ್ಟ್ಟು ಶಕ್ತಿ ಇದೆಯೋ, ಅಷ್ಟು ಉತ್ತಮ ಕೆಲಸವನ್ನು ಮಾಡಬೇಕು. ಶಕ್ತಿ ಇದ್ದಷ್ಟು ಅದನ್ನು ಮಾಡಬೇಕು. ತಾನೇ ಪಂಡಿತನೆಂಬ ಭಾವನೆಯಿಂದ ಯಾವುದನ್ನೂ ಕೂಡ ಹಗುರವಾಗಿ ಕಾಣಬಾರದು. ಪ್ರತಿಯೊಂದು ವಿಷಯದಲ್ಲೂ ಜಾಗರೂಕರಾಗಿ ವರ್ತಿಸಬೇಕು. ಅಂಥವನನ್ನೇ ಪಂಡಿತ ಎನ್ನುತ್ತಾರೆ.
ವಿಹಿತವಾದದ್ದನ್ನು ಆಚರಿಸು: ತನ್ನ ಯೋಗ್ಯತೆಗೆ ಮೀರಿದ ಕಾಮನೆಯನ್ನು ಅಪೇಕ್ಷಿಸಬಾರದು. ಯಾವುದು ಶಾಸ್ತ್ರ ನಿಷಿದ್ಧವೋ ಅದನ್ನೂ ಕೂಡ ಅಪೇಕ್ಷಿಸಬಾರದು. ತನಗೆ ಯೋಗ್ಯವಾದದ್ದನ್ನು, ಶಾಸ್ತ್ರವಿಹಿತವಾದದ್ದನ್ನು ದ್ವೇಷಿಸಲೂಬಾರದು.
ತನಗಿಂತ ಶಕ್ತಿಯಲ್ಲಿ, ಗುಣದಲ್ಲಿ, ಜ್ಞಾನದಲ್ಲಿ ಯಾರು ಶ್ರೇಷ್ಠ್ಠನೋ, ಅವನನ್ನೂ ಕೂಡ ದ್ವೇಷ ಮಾಡಬಾರದು. ಇದಕ್ಕೆ ವಿರುದ್ಧವಾಗಿ ನಡೆಯುವನನ್ನು ಜಗತ್ತು ಮೂರ್ಖ ಎಂದು ಕರೆಯುತ್ತದೆ.
ಹಿರಿಯರನ್ನು ತಿರಸ್ಕರಿಸಬೇಡ: ಜ್ಞಾನಿಯಾದವರು ಸದಾಚಾರವುಳ್ಳವರು. ವಯಸ್ಸಿನಲ್ಲಿ ಹಿರಿಯರು, ವಿವೇಕಿಗಳು, ಶ್ರೀಮಂತರು, ಉತ್ತಮ ವಂಶದಲ್ಲಿ ಹುಟ್ಟಿದವರು. ಹಿರಿಯರನ್ನು ಯಾವಾಗಲೂ ಭಕ್ತಿಗೌರವದಿಂದ ಕಾಣಬೇಕು. ಮೂರ್ಖನಾದವನು ಮಾತ್ರ ಹಿರಿಯರಿಗೆ ಅಗೌರವ ಮಾಡುತ್ತಾನೆ. ತುಚ್ಛರನ್ನಾಗಿ ಕಾಣುತ್ತಾನೆ. ಆದ್ದರಿಂದ ಜ್ಞಾನಿಗಳನ್ನು, ಹಿರಿಯರಾದವರನ್ನು ಯಾವುದೇ ರೀತಿಯಲ್ಲಿಯೂ ತಿರಸ್ಕಾರ ಮಾಡಬಾರದು.