ಇಂದಿನಿಂದ ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ: ಕಂದಾಯ ಸಚಿವ ಆರ್. ಅಶೋಕ್

Advertisement

ಬೆಳಗಾವಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇಂದಿನಿಂದ ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಸಧ್ಯಕ್ಕೆ ದಂಡ ವಿಧಿಸುವುದಿಲ್ಲ. ಆದರೆ, ಜನರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರು.
ಎಲ್ಲಾ ಥಿಯೇಟರ್​ಗಳು, ಮಾಲ್​​ಗಳು, ಹೋಟೆಲ್, ರೆಸ್ಟೋರೆಂಟ್, ಒಳಾಂಗಣ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳು, ಸಭೆ, ಸಮಾರಂಭ, ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದರು. ರಾಜ್ಯದ ಎಲ್ಲ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್​ಗಳಲ್ಲಿ ಮಾಲೀಕರು ಹಾಗೂ ಸಿಬ್ಬಂದಿಗೆ ಮಾಸ್ಕ್ ಹಾಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಮೂರನೇ ಡೋಸ್ ಬೂಸ್ಟರ್ ಡೋಸ್ ಲಸಿಕೆ ಪಡೆಯುವುದು ಕೂಡ ಉತ್ತಮ. ಇನ್ನು ಹೋಟೆಲ್, ಪಬ್, ರೆಸ್ಟೋರೆಂಟ್​​ಗಳಲ್ಲಿ ಇಗಿರುವಷ್ಟೇ ಸೀಟ್​ಗಳಿಗೆ ಮಾತ್ರ ಜನರಿಗೆ ಅವಕಾಶ ನೀದಬೇಕು. ಹೊಸದಾಗಿ ಹೆಚ್ಚುವರಿ ಸೀಟ್ ವ್ಯವಸ್ಥೆಗಳನ್ನು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಹೊಸ ವರ್ಷಾಚರಣೆಗೆ ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್‌ ಸೇರಿದಂತೆ ಎಲ್ಲೆಲ್ಲಿ ಸಂಭ್ರಮಾಚರಣೆ ಮಾಡಲಾಗುವುದೋ ಅಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ. ಸಂಭ್ರಮಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗುವುದು. 1 ಗಂಟೆ ಬಳಿಕ ಯಾವುದೇ ಹೊಸ ವರ್ಷಾಚರಣೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದರು. ವಿಶೇಷವಾಗಿ ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಜನಸಂದಣಿಯಿರುವ ಪ್ರದೇಶಗಳಲ್ಲಿ ಹಾಗೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರುವುದು ಒಳಿತು ಎಂದು ತಿಳಿಸಿದರು.