ಇನ್ನು ನಾಲ್ಕು ವರ್ಷ ಅಲ್ಲ ಮೂರೇ ವರ್ಷ

Advertisement

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲು ಮುಂದಾಗಿದ್ದು, ಹಿಂದಿನ ಎನ್‌ಇಪಿ’ಗೆ ಕೋಕ್‌ ನೀಡಿದೆ.
ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಸಿನಂತೆ 2024-25ನೇ ಸಾಲಿನಿಂದ ನಾಲ್ಕು ವರ್ಷಗಳ ಪದವಿ ರದ್ದು ಮಾಡಿದೆ. 2024-25ನೇ ಶೈಕ್ಷಣಿಕ ಸಾಲಿನಿಂದ ಪದವಿ ಕಾರ್ಯಕ್ರಮಗಳಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಿ ರಾಜ್ಯ ಸರ್ಕಾರವು ರಾಜ್ಯದಲ್ಲಿನ ಉನ್ನತ ಶಿಕ್ಷಣ ಇಲಾಖೆಯಡಿಯ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಪದವಿ ಕಾರ್ಯಕ್ರಮಗಳಿಗೆ 2024-25 ನೇ ಶೈಕ್ಷಣಿಕ ವರ್ಷದಿಂದ ಇದರ ಮಾರ್ಗಸೂಚಿಗಳಿಗನುಸಾರವಾಗಿ ಪದವಿ ಕಾರ್ಯಕ್ರಮಗಳ ಅವಧಿ ಮತ್ತು ಪಠ್ಯಕ್ರಮವನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶ ನೀಡಿದೆ. ಈ ಹಿಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ ರಾಜ್ಯದಲ್ಲಿ ನಾಲ್ಕು ವರ್ಷಗಳ ಪದವಿ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೊಳಿಸಲು ಆಯೋಗವನ್ನು ರಚಿಸಲಾಗಿದೆ. ಈ ಆಯೋಗದ ಶಿಫಾರಸಿನಂತೆ ನಾಲ್ಕು ವರ್ಷಗಳ ಪದವಿ ರದ್ದುಗೊಳಿಸಿ, ಈ ಹಿಂದಿನಂತೆ ಮೂರು ವರ್ಷಗಳ ಪದವಿ ಮುಂದುವರೆಸಲು ಆದೇಶಿಸಲಾಗಿದೆ.