ಇನ್ನು ಹಳ್ಳಿಗೆ ಓಡಬೇಕಿಲ್ಲ ನವ ವೈದ್ಯರು!

Advertisement

ಬೆಳಗಾವಿ(ವಿಧಾನಸಭೆ): ವೈದ್ಯ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯ್ತಿ ದೊರೆಯಲಿದೆ. ಈ ಸಂಬಂಧ ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ಕಾಯ್ದೆಗೆ ಮಹತ್ವದ ತಿದ್ದುಪಡಿಯನ್ನು ಸರ್ಕಾರ ತಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದರು. ವಿಪಕ್ಷ ಧರಣಿಯಲ್ಲಿದ್ದ ಕಾರಣ, ಸದನ ಧ್ವನಿ ಮತದಿಂದ ಅಂಗೀಕರಿಸಿತು.
ಇದರಿಂದಾಗಿ ಕಡ್ಡಾಯ ಗ್ರಾಮೀಣ ಸೇವೆ ಮಾಡುವುದು ತಪ್ಪಲಿದೆ. ವೈದ್ಯರು ಗ್ರಾಮಾಂತರ ಪ್ರದೇಶಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದುದರಿಂದ, ಸೇವೆಯನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ತರಲಾಗಿತ್ತು. ಆದರೆ, ಈಗ ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಕೋರ್ಸ್ ಮುಗಿದ ತಕ್ಷಣ ಕಡ್ಡಾಯವಾಗಿ ಗ್ರಾಮಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ವಿನಾಯ್ತಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.