ಇನ್ಸ್ಟಾಗ್ರಾಮ್‌ನಲ್ಲಿ ಅಂಕುರಿಸಿದ ಪ್ರೇಮ: ಮುಸ್ಲಿಂ ಯುವಕನೊಂದಿಗೆ ಕುಷ್ಟಗಿ ಯುವತಿ ಮದುವೆ

Advertisement

ಕುಷ್ಟಗಿ: ಇನ್ಸ್ಟಾಗ್ರಾಮನಲ್ಲಿ ಪರಿಚಯವಾದ ಯುವಕನೊಂದಿಗೆ ಯುವತಿಯು ಡಿ.‌ 19ರಂದು ಹೈದ್ರಾಬಾದ್‌ನ ವಖ್ಫ್ ಬೋರ್ಡ್‌ನಲ್ಲಿ ಮದ್ವೆಯಾದ ಘಟನೆ ಜರುಗಿದೆ.
ಪಟ್ಟಣದ ಇಂದಿರಾನಗರದ ಯುವತಿ ಡಿ.16ರಂದು ಸಂಕಲ್ಪ ಕಂಪ್ಯೂಟರ್ ಇನ್ಸ್‌ಟಿಟ್ಯೂಟ್‌ಗೆ ತರಬೇತಿ ಪಡೆಯಲು ಹೋಗಿದ್ದು ತರಬೇತಿ ಮುಗಿಸಿಕೊಂಡು ವಾಪಸ್ಸು ಮನೆಗೆ ಬಾರದ ಹಿನ್ನೆಲೆಯಲ್ಲಿ ಪರಶುರಾಮ ಛಲವಾದಿ ಎಂಬುವವರು ನನ್ನ ಮಗಳು ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಡಿ.16 ರಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಸು ಗಿರಿ, ಗಂಗಾವತಿ ವಿಭಾಗ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಇವರುಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಮೌನೇಶ ರಾಠೋಡ ಪ್ರಕರಣಕದ ಕುರಿತು ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ, ಕುಷ್ಟಗಿ ಪಟ್ಟಣದ ಯುವತಿ ರಮ್ಯಾ(23) (ಹೆಸರು ಬದಲಾಯಿಸಲಾಗಿದೆ) ಡಿ.16ರಂದು ಕುಷ್ಟಗಿಯಿಂದ ಹೈದ್ರಾಬಾದ್‌ಗೆ ತೆರಳಿ ಶೇಖ್ ವಹಿದ್‌ ಎಂಬ ಹೈದ್ರಾಬಾದ್ ನಿವಾಸಿಯ ಜೊತೆಗೆ ಮದುವೆಯಾಗಿರುವುದು ತಿಳಿದುಬಂದಿದೆ.
ಕುಷ್ಟಗಿ ಠಾಣೆಯಲ್ಲಿ ವಿಚಾರಣೆ:
ಈಕೆ ಕಳೆದ ಸುಮಾರು ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡು, ದಿನಗಳು ಕಳೆಯುತ್ತಿದ್ದಂತೆ ಸಲುಗೆಯಿಂದ ಮಾತುಕತೆ ಮೂಲಕ ಪ್ರೀತಿ ಅಂಕುರಿಸಿ, ಯುವತಿ ಮನಃಪೂರ್ವಕವಾಗಿ ಶೇಖ್ ವಹಿದ್‌ನನ್ನು ಮದುವೆಯಾದ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ಪಿಎಸ್‌ಐ ಮೌನೇಶ್ ರಾಠೋಡ ಅವರು ಹೈದ್ರಾಬಾದ್‌ಗೆ ತೆರಳಿ ಯುವತಿ ಮತ್ತು ಯುವಕನನ್ನು ಕುಷ್ಟಗಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪ್ರಸಂಗ ಜರುಗಿತು.
ಪಾಲಕರ ಮನವೊಲಿಕೆ:
ಪಾಲಕರು ಎಷ್ಟೇ ಮನವೊಲಿಸಿದರೂ ಯುವತಿಯು ಹೈದರಾಬಾದ್‌ ಮೂಲದ ಯುವಕನನ್ನು ಬಿಡಲು ನಿರಾಕರಿಸಿದ್ದಾಳೆ. ನಾನು ಮದುವೆಯಾದ ಯುವಕನ ಜೊತೆಗೇ ಹೋಗುತ್ತೇನೆ. ನನಗೆ ಯಾರ ಬಲವಂತವೂ ಇಲ್ಲ. ಸ್ವಯಿಚ್ಛೆಯಿಂದಲೇ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಳೆ. ಈ ಮಾತನ್ನು ಪೊಲೀಸರೆದುರು ಆಕೆ ಹೇಳಿದ್ದಾಳೆ.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಹಾಗೂ ಪಿಎಸ್‌ಐ ಮೌನೇಶ ರಾಠೋಡ ಮಾತನಾಡಿ, ಇಂದಿರಾ ನಗರದ ಯುವತಿ ಕಾಣೆಯಾದ ಕುರಿತು ಅವರ ಪಾಲಕರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಭೇದಿಸಿದ್ದು, ಆಕೆ ಮುಸ್ಲಿಂ ಯುವಕನ ಜೊತೆಗೆ ಮದುವೆಯಾಗಿರುವುದಾಗಿ ಸ್ವಯಂ ಹೇಳಿಕೆ ನೀಡಿದ್ದಾಳೆ. ಇದು ಲವ್ ಮ್ಯಾರೇಜ್ ಆಗಿದೆ ಹೊರತು, ಲವ್ ಜಿಹಾದ್ ಅಲ್ಲ ಎಂದು ಸ್ಪಷ್ಟನೆ ನೀಡಿದರು.