ಈಗ ಪೋಸ್ಟರ್ ಮುಂದೆ ಪಿಕ್ಚರ್…

Advertisement

ಅಬಿ ಟ್ರೇಲರ್-ಆಗೆ ಪಿಚ್ಚರ್ ಎಂದು ಸೋದಿ ಮಾಮಾ ಹೇಳಿದ್ದಾರೆ. ಈಗ ಸಿನೆಮಾಗಳ ಭರ್ಜರಿ ಶೂಟಿಂಗ್ ನಡೆದಿವೆ. ಅಬ್ಬ..! ಒಂದೊಂದು ಸಿನೆಮಾ ಹೆಸರು ಕೇಳಿದರೆ ಮೈ ಜುಂ ಅನ್ನುತ್ತದೆ. ಅದೆಂತಹ ಹೆಸರುಗಳು…
ಎಲ್ಲಿ ನೋಡಿದರಲ್ಲಿ ಸೆಂಟಿಮೆಂಟ್ ಹೆಸರಿನ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಬರೀ ಮನೆತನದ ಹೆಸರಿನವು. ಒಂದೂ ಕೂಡ ಭಯ ಪಡುವ ಸಿನೆಮಾಗಳ ಪೋಸ್ಟರುಗಳೇ ಇಲ್ಲ. ಜನರು ಈ ಸಿನೆಮಾಗಳನ್ನು ಹೇಗೆ ಗೆಲ್ಲಿಸುತ್ತಾರೇನೋ? ಇವುಗಳಲ್ಲಿ ಯಾವ ಸಿನೆಮಾ ಬಾಕ್ಸಾಫೀಸ್ ಹಿಟ್ ಆಗುತ್ತವೆಯೋ ಏನೋ ಎಂದು.
ಎಷ್ಟು ಸೆಂಟಿಮೆಂಟ್ ಸಿನೆಮಾಗಳು ಇರಬಹುದು ಎಂದು ಪರೀಕ್ಷೆ ಮಾಡಲು ಹೊರಗೆ ಹೊರಟ. ಮನೆಯಿಂದ ಹತ್ತು ಹೆಜ್ಜೆ ಹೋಗುತ್ತಲೇ ಅಲ್ಲಿ `ಅಪ್ಪ-ಮಕ್ಕಳು’ ಎಂಬ ಪೋಸ್ಟರ್. ಹಿಂದೆ ಅಪ್ಪ ಕೈ ಮುಗಿದುಕೊಂಡು ನಿಂತಿದ್ದರೆ ಎಡ ಮತ್ತು ಬಲ ಮಕ್ಕಳು ಕಿಸಿಕಿಸಿ ನಗುವ ಚಿತ್ರಗಳು ಕಾಣುತ್ತಿತ್ತು. ಎಡಗಡೆ ಸರ್ಕಲ್‌ನಲ್ಲಿ ಅಪ್ಪ-ಮಗಳು ಎಂಬ ಪೋಸ್ಟರ್ ಕಂಡಾಗ ಸ್ವಲ್ಪ ಹೊತ್ತು ನಿಂತು ನೋಡಿದಾಗ…ಅಪ್ಪನ ಕಣ್ಣಲ್ಲಿ ಸಣ್ಣಗೇ ನೀರು ಜಿನುಗುವುದನ್ನು ಚಿತ್ರಿಸಲಾಗಿತ್ತು. ಪಕ್ಕದಲ್ಲೇ ಮಗಳು ವಿನೀತಳಾಗಿ ಕೈಮುಗಿಯುವ ಚಿತ್ರ ಬಿಡಿಸಲಾಗಿತ್ತು.
ಆ ಕಡೆ ಸರ್ಕಲ್‌ನಲ್ಲಿ ಮಗ-ಮೊಮ್ಮಗ ಮತ್ತು ಅಳಿಯ ಎಂಬ ಸಿನೆಮಾ ಪೋಸ್ಟರ್ ನೋಡಿ ಏನೊಂದು ಮಾತನಾಡದೇ ನಿಂತುಬಿಟ್ಟ ತಿಗಡೇಸಿ. ಬರೀ ಇಂಥವೇನಾ ಅಂದುಕೊಂಡು ಬಲಕ್ಕೆ ತಿರುಗಿದರೆ ಅಲ್ಲಿ ನನ್ನ ಅಳಿಯ-ನಿಮ್ಮ ಗೆಳೆಯ ಎಂಬ ಸಿನೆಮಾ ಪೋಸ್ಟರ್ ನೋಡಿದ ತಿಗಡೇಸಿ ಸ್ವಲ್ಪ ದೂರಕ್ಕೆ ಹೋದಾಗ…ಅಲ್ಲಿ ಮುದ್ದಿನ-ಸೊಸೆ ಎಂಬ ಪೋಸ್ಟರ್ ಕಂಡು ಮೂಕ ವಿಸ್ಮಿತನಾದ. ಇನ್ನೊಂದೆಡೆ ಹೋದಾಗ ಪ್ರೀತಿಯ ಪತ್ನಿ ಎಂಬ ಪೋಸ್ಟರ್ ನೋಡಿದ. ಇದೇನು ಭಯಂಕರ ಸೆಂಟಿಮೆಂಟ್ ಸಿನೆಮಾಗಳೇ ಬರುತ್ತಿವೆ. ಇಂಥದ್ದರಲ್ಲಿ ಸೋದಿ ಮಾಮಾ ಇನ್ನೇನು ಬಾಕಿ ಅಂತಿದಾರೋ? ಅದಕ್ಯಾಕೆ ನಾವು ತಲೆ ಕೆಡೆಸಿಕೊಳ್ಳಬೇಕು ಬಿಡು ಎಂದು ತಿಗಡೇಸಿ ತನ್ನ ದಾರಿ ಹಿಡಿದ.