ಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ

Advertisement

ಹುಬ್ಬಳ್ಳಿ: ರಾಜ್ಯದಲ್ಲಿ ಹಾಗೂ ನಮ್ಮ ಭಾಗದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ. ಹೀಗಾಗಿ ಡಿಜೆ ಸೇರಿದಂತೆ ಅದ್ಧೂರಿಯಾಗಿ ಆಚರಣೆ ಮಾಡಲು ಯಾವುದೇ ನಿರ್ಬಂಧ ಹೇರಬಾರದು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ. ಕಳೆದ ಬಾರಿ ಗಣೇಶ ಮೂರ್ತಿ ಕೂರಿಸಿದ್ದೇವೆ. ಈ ಬಾರಿ ರಾಜ್ಯ ಸರ್ಕಾರ ಯಾವುದೇ ಗೊಂದಲ ಮಾಡಲ್ಲ ಎಂಬ ನಂಬಿಕೆ ಇದೆ. ಈ ವಿಷಯದಲ್ಲಿ ಮಹಾನಗರ ಪಾಲಿಕೆ ಸೂಕ್ತ ತೀರ್ಮಾನ ಮಾಡಬೇಕು. ಅಲ್ಲದೇ, ಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ. ಅವರೂ ಕೂಡಾ ವಿವಾದ ಮಾಡಬಾರದು. ಅವರಿಗೂ ವರ್ಷದಲ್ಲಿ ಎರಡು ಬಾರಿ ನಮಾಜ್‌ಗೆ ಅವಕಾಶವಿದೆ. ಅನಗತ್ಯ ವಿವಾದವನ್ನು ಸರ್ಕಾರ ಮೈಮೇಲೆ ಎಳೆದುಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.