`ಉಗ್ರ’ ನಿಲುವಿನಿಂದ ಕೆನಡಾ ದೇಶಕ್ಕೇ ಸಮಸ್ಯೆ

Advertisement

ಖಾಲಿಸ್ತಾನ್‌ಗೆ ಕೆನಡಾದಲ್ಲಿ ಬಹಿರಂಗ ಬೆಂಬಲ ದೊರಕಿರುವುದು ದುರ್ದೈವ. ಉಗ್ರರನ್ನು ಬೆಂಬಲಿಸಿದ ಯಾವ ದೇಶವೂ ಉಳಿದಿಲ್ಲ. ಇದಕ್ಕೆ ಪಾಕ್ ಸೇರಿದಂತೆ ಹಲವು ದೇಶಗಳ ಪರಿಸ್ಥಿತಿ ಕಣ್ಣಮುಂದೆ ಇದೆ. ಕೆನಡಾ ಇದನ್ನು ಅರಿತರೆ ಕ್ಷೇಮ.

ಉಗ್ರವಾದಿಗಳಿಗೆ ಆಶ್ರಯ ನೀಡಿದ ಯಾವ ದೇಶವೂ ಏಳಿಗೆ ಕಂಡಿಲ್ಲ. ಪಾಕ್ ಇಂದಿನ ಅರ್ಥಿಕ ಸ್ಥಿತಿಗೆ ಉಗ್ರ ಸಂಘಟನೆಗಳೇ ಕಾರಣ. ಈಗ ಕೆನಡಾ ಅದೇ ಹಾದಿಯಲ್ಲಿ ಸಾಗಿದೆಯೇ ಎಂಬ ಅನುಮಾನ ಬರುತ್ತಿದೆ. ಅಲ್ಲಿಯ ಪ್ರಧಾನಿ ಭಾರತದ ಮೇಲೆ ಮಾಡಿದ ಗುರುತರ ಆರೋಪ ಈಗ ತಿರುಗುಬಾಣವಾಗಿದೆ. ಕೆನಡಾಗೆ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಕೆ ಬೆಂಬಲ ನೀಡದೆ ಇರುವುದನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಕೆನಡಾ ತನ್ನ ಮಾತುಗಳನ್ನು ತಾನೇ ನುಂಗಿಕೊಳ್ಳುವ ಕಾಲ ಬರಲಿದೆ. ಜಿ-೨೦ ಶೃಂಗಸಭೆ ಕಾಲದಲ್ಲಿ ಮೋದಿ ಕೆನಡಾದ ಪ್ರಧಾನಿಗೆ ಕಿವಿಮಾತು ಹೇಳಿದ್ದರು. ಅದನ್ನು ಕೇಳಿದ ಮೇಲೆ ಕೆನಡಾ ತನ್ನ ನಿಲುವನ್ನು ಬದಲಿಸಿಕೊಳ್ಳಬಹುದು ಎಂಬ ಭಾವನೆ ಮೂಡಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಖಾಲಿಸ್ತಾನ್ ನಾಯಕನ ಹತ್ಯೆಗೆ ಭಾರತ ಕಾರಣ ಎಂದು ಆರೋಪಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆಯುವುದಿಲ್ಲ ಎಂಬುದನ್ನು ಕೆನಡಾ ಮೊದಲೇ ಅರಿತುಕೊಳ್ಳಬೇಕಿತ್ತು. ಬೇರೆ ದೇಶಗಳ ಹಾಗೆ ಭಾರತದಲ್ಲಿ ಅಧಿಕಾರದಲ್ಲಿರುವವರು ಮನಬಂದಂತೆ ವರ್ತಿಸಲು ಬರುವುದಿಲ್ಲ. ಅಲ್ಲದೆ ಬೇರೆ ದೇಶದಲ್ಲಿ ಒಬ್ಬ ವ್ಯಕ್ತಿಯ ಕೊಲೆ ಮಾಡಲು ಅನಿವಾರ್ಯತೆ ಭಾರತಕ್ಕೆ ಏನಿದೆ ಎಂಬುದು ಅಲೋಚಿಸದೇ ಇರುವುದು ಆಶ್ಚರ್ಯದ ಸಂಗತಿ. ಹರ್‌ದೀಪ್‌ಸಿಂಗ್ ನಿಜ್ಜರ್ ಉಗ್ರವಾದಿಯೇ ಆಗಿದ್ದರೂ ಆತನ ಹತ್ಯೆ ಭಾರತಕ್ಕೆ ಅಗತ್ಯವೇನೂ ಅಲ್ಲ. ಅಲ್ಲದೆ ಭಾರತದಲ್ಲಿ ಖಾಲಿಸ್ತಾನ ಸಂಘಟನೆಗೆ ಬೆಂಬಲ ವ್ಯಕ್ತಪಡಿಸುವವರು ಬೆರಳಣಿಕೆ ಮಾತ್ರ. ಹೀಗಿರುವಾಗ ವಿದೇಶಿ ನೆಲದಲ್ಲಿ ಭಾರತ ಸರ್ಕಾರಕ್ಕೆ ಆತನನ್ನು ಹೊಡೆದು ಹಾಕುವ ತುರ್ತು ಏನೂ ಇರುವುದಿಲ್ಲ ಎಂಬ ಅರಿವು ಮೂಡಿದ್ದರೆ ಕೆನಡಾ ಪ್ರಧಾನಿ ಈ ಆರೋಪ ಮಾಡುತ್ತಿರಲಿಲ್ಲ.
ಜಾಗತಿಕ ಮಟ್ಟದಲ್ಲಿ ಈಗ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ದೊಡ್ಡ ಧ್ವನಿ ಎದ್ದಿದೆ. ಅಮೆರಿಕ ಸೇರಿದಂತೆ ಎಲ್ಲ ದೇಶಗಳಲ್ಲೂ ಈಗ ಉಗ್ರ ಸಂಘಟನೆಗಳನ್ನು ದೂರವಿಡುವ ಕೆಲಸ ನಡೆದಿದೆ. ಜಿ ೨೦ ಸಭೆಯಲ್ಲಿ ಭಾಗವಹಿಸಿದ್ದ ಯುಎಇ ದೊರೆ ಮಾತನಾಡಿ ಇನ್ನುಮುಂದೆ ಉಗ್ರರು ಮುಸ್ಲಿಂ ದೇಶಗಳಿಂದ ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲೇ ತಲೆ ಎತ್ತುತ್ತಾರೆ. ಎಂದು ಹೇಳಿದ್ದು ಕೆನಡಾ ಪರಿಸ್ಥಿತಿ ನೋಡಿದರೆ ನಿಜ ಎನಿಸುತ್ತಿದೆ. ಉಗ್ರ ಸಂಘಟನೆಯಿಂದ ಕೆನಡಾ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಕೊರೊನಾ ನಂತರ ಹಣದುಬ್ಬರ ಮೂರು ಪಟ್ಟು ಅಧಿಕಗೊಂಡಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧಗಳು ಅಧಿಕಗೊಂಡಿವೆ. ೨೦೧೬ ರಿಂದ ಇಲ್ಲಿಯವರೆಗೆ ೩೦ ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೆನಡಾದಲ್ಲಿ ಕೆಲಸ ಮಾಡುವವರಲ್ಲಿ ಭಾರತೀಯರೇ ಹೆಚ್ಚು. ಈಗ ಅವರು ರಾಜಕೀಯ ಬಲವನ್ನೂ ಗಳಿಸಿಕೊಂಡಿದ್ದಾರೆ. ಭಾರತಕ್ಕಿಂತ ಕೆನಡಾ ಸರ್ಕಾರದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಸಚಿವರ ಸಂಖ್ಯೆ ಅಧಿಕವಾಗಿದೆ.
ಭಾರತ- ಕೆನಡಾ ಸಂಬಂಧ ಹಿಂದಿನಿಂದಲೂ ಚೆನ್ನಾಗಿದೆ. ಈಗಲೂ ಜನರಲ್ಲಿ ಅದೇ ಬಾಂಧವ್ಯ ಮುಂದುವರಿದಿದೆ. ವ್ಯಾಪಾರ-ವಾಣಿಜ್ಯ ಸಂಬಂಧಗಳು ಹಾಗೇ ಇವೆ. ಅವುಗಳನ್ನು ಮುಂದುವರಿಸುವುದು ಅಗತ್ಯ. ಅದಕ್ಕೆ ಕೆನಡಾ ಸಿಖ್ ಸಮುದಾಯವನ್ನು ಉಗ್ರ ಸಂಘಟನೆಯಿಂದ ಬೇರ್ಪಡಿಸಬೇಕು. ಕೆನಡಾದಲ್ಲಿರುವ ಎಲ್ಲ ಸಿಖ್ ಸಮುದಾಯವರು ಖಾಲಿಸ್ತಾನಿಗಳಲ್ಲ. ಈ ಸತ್ಯವನ್ನು ಎರಡೂ ದೇಶಗಳು ಪರಿಗಣಿಸಿ ಉಗ್ರರನ್ನು ಗುರುತಿಸಿ ದೂರವಿಡುವ ಕೆಲಸ ಕೈಗೊಳ್ಳಬೇಕು. ಇದೇ ರೀತಿ ಈ ಕೆಲಸವನ್ನು ಕೆಲವು ಮುಸ್ಲಿಂ ದೇಶಗಳು ಕೈಗೊಂಡವು. ಯಾವುದೇ ದೇಶದ ಆಡಳಿತಕ್ಕೂ ಧರ್ಮಕ್ಕೂ ಸಂಬಂಧ ಇರಬಾರದು. ಮೊದಲಿನಿಂದಲೂ ಈ ರೀತಿ ಸಂಬಂಧ ಕಲ್ಪಿಸಲು ಹೋದಾಗ ಸಂಘರ್ಷಗಳು ನಡೆದಿವೆ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಇದನ್ನು ಎರಡೂ ದೇಶ ಅರಿತು ನಡೆದಲ್ಲಿ ಉಗ್ರಸಂಘಟನೆ ತಂತಾನೇ ಶಕ್ತಿಹೀನಗೊಳ್ಳುವುದು ಶತಃಸಿದ್ಧ. ಇಂಥ ಸಂಘಟನೆಗಳ ವಿರುದ್ಧ ಹೋರಾಟ ನಡೆಸುವುದು ಕೆನಡಾಗೆ ಹೊಸದಿರಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಉಗ್ರ ಸಂಘಟನೆಗೂ ಅಜಗಜಾಂತರ. ಎಲ್ಲಿ ಹಿಂಸೆ ಇರುತ್ತೋ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದಿಲ್ಲ. ಬಂದೂಕಿನ ಮೂಲಕ ದೇಶ ಕಟ್ಟುತ್ತೇವೆ ಎನ್ನುವುದೇ ಒಂದು ಭ್ರಮೆ.ಅಂಥ ಪ್ರಯತ್ನಕ್ಕೆ ಬೆಂಬಲ ನೀಡುವುದು ಮೂರ್ಖತನ.