ಉಡುಪಿಯಲ್ಲಿ ಖುಜಕಿಸ್ಥಾನದ ಪ್ರಜೆಯ ಅಂತ್ಯಸಂಸ್ಕಾರ

ಸಾವು
Advertisement

ಉಡುಪಿ: ರಷ್ಯಾದ ಖುಜಕಿಸ್ಥಾನದ ಪ್ರಜೆಯೋರ್ವಳ ಅಂತ್ಯಸಂಸ್ಕಾರ ಉನ್ನತ ಮಟ್ಟದ ಕಾನೂನು ಪ್ರಕ್ರಿಯೆ ಬಳಿಕ ಕ್ರಿಶ್ಚಿಯನ್ ವಿಧಿ ವಿಧಾನದಂತೆ ಇಲ್ಲಿನ ಸಿ.ಎನ್.ಐ ಚರ್ಚಿನ ದಫನ ಭೂಮಿಯಲ್ಲಿ ನಡೆಸಲಾಯಿತು.
ಮಹಿಳೆ ಮೃತಪಟ್ಟು 35 ದಿನ ಕಳೆದಿತ್ತು. ಕಾನೂನು ಪ್ರಕ್ರಿಯೆಯಿಂದಾಗಿ ವಿಳಂಬವಾಗಿದ್ದು, ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾರ್ಗದರ್ಶನ ಹಾಗೂ ನಗರ ಪೋಲಿಸ್ ಠಾಣೆಯ ಎಸ್ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ಸುಷ್ಮಾ ಕಾನೂನು ಪ್ರಕ್ರಿಯೆ ನಡೆಸಿದ್ದರು.
ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಸಭಾಪಾಲಕ ರೆl ಜೋಸ್ ಬೆನೆಡಿಕ್ಟ್ ಅಮ್ಮನ್ನ ನೇರವೇರಿಸಿದರು. ವಿಶ್ರಾಂತ ಸಭಾಪಾಲಕ ರೆl ಐಸನ್ ಸುಕುಮಾರ ಪಾಲನ್ನ, ಪಾಸ್ಟರ್ ಅಬ್ರಹಾಂ, ಪಾಸ್ಟರ್ ಜೋಯ್ಸ್ ಕುರಿಯ ಕೋನ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೊದಲಾದವರು ಭಾಗವಹಿಸಿದ್ದರು.

ಯಾರೀಕೆ ಮಹಿಳೆ?: ಉಡುಪಿ ನಿವಾಸಿ ದಿ. ಕುಲಿನ್ ಮಹೇಂದ್ರ ಷಾ ಅವರೊಂದಿಗೆ ರಷ್ಯಾದ ಖುಜಕಿಸ್ಥಾನದ ಪ್ರಜೆ ಸುಲ್ತಾನೆಟ್ ಬೆಕ್ಟೆನೋವಾ 2009ರಲ್ಲಿ ಮಣಿಪಾಲದ ಸಿಎನ್ಐ ಚರ್ಚಿನಲ್ಲಿ ವಿವಾಹವಾಗಿದ್ದರು. ಉಡುಪಿ ಪುತ್ತೂರಿನ ಬಾಡಿಗೆ ಮನೆಯಲ್ಲಿ 13 ವರ್ಷದ ರೆಬೆಕಾ ಕುಲಿನ್ ಷಾ ಮಗಳೊಂದಿಗೆ ವಾಸವಾಗಿದ್ದರು.
ಕಳೆದ ಮೇ 7ರಂದು ಸುಲ್ತಾನೆಟ್ ಬೆಕ್ಟೆನೋವಾ (51) ಸ್ನಾನದ ಕೊಠಡಿಯಲ್ಲಿ ಕುಸಿದುಬಿದ್ದರು.


ಮಾಹಿತಿ ತಿಳಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.
ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದನ್ನು ದೃಢೀಕರಿಸಿದ್ದರು. ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಘಟನೆ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೃತ ವಿದೇಶಿ ಮಹಿಳೆಯ ವಾರಸುದಾರರ ಪತ್ತೆ ಕಾರ್ಯವನ್ನು ನಗರ ಠಾಣೆಯ ಪೋಲಿಸರು ಭಾರತದ ರಾಯಭಾರಿ ಕಚೇರಿ ಮೂಲಕ ನಡೆಸಿ ಯಶಸ್ವಿಯಾಗಿದ್ದರು.
ವಿಷಯ ತಿಳಿದ ಮೃತ ಮಹಿಳೆಯ ಮಗ ಶವ ಪಡೆಯಲು ಭಾರತಕ್ಕೆ ಬರಲು ಅಸಹಾಯಕ ಸ್ಥಿತಿ ಎದುರಾದ್ದರಿಂದ ಅಂತ್ಯಸಂಸ್ಕಾರ ನಡೆಸಲು ರಾಯಭಾರಿ ಕಚೇರಿ ಮೂಲಕ ಮಣಿಪಾಲ ಸಿಎನ್ಐ ಚರ್ಚಿಗೆ ನಡೆಸುವಂತೆ ವಿನಂತಿಯನ್ನು ಮಿಂಚಂಚೆ ಮೂಲಕ ರವಾನಿಸಿದ್ದರು.