ಉತ್ತರಧ್ರುವದಿಂದ ದಕ್ಷಿಣ ಧ್ರುವಕೂ ವಿಭಜನೆ ಗಾಳಿಯು ಬೀಸುತಿದೆ

Advertisement

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ-ದಕ್ಷಿಣ ನಡುವೆ ಮಾನಸಿಕ ಅಂತರ ಅಧಿಕಗೊಳ್ಳುತ್ತಿದೆ. ಬಿಜೆಪಿ ಪಕ್ಷ ಕಾಂಗ್ರೆಸ್ ಪಕ್ಷವನ್ನು ಮಾತ್ರ ಅಲ್ಲ ಎಲ್ಲ ರಾಜಕೀಯ ಪಕ್ಷಗಳನ್ನು ನುಂಗಿ ಹಾಕಲು ಹವಣಿಸುತ್ತಿದೆ. ಇದಕ್ಕಾಗಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಧ್ಯಕ್ಷೀಯ ಪದ್ಧತಿ ಮತ್ತು ಏಕಸ್ವಾಮ್ಯ ಧೋರಣೆಯತ್ತ ಪ್ರಜಾವ್ಯವಸ್ಥೆ ಸಾಗುವಂತೆ ಮಾಡುವ ಪ್ರಯತ್ನಗಳು ಗಾಢವಾಗಿ ಕಂಡು ಬರುತ್ತಿದೆ.
ಸಾಮಾನ್ಯವಾಗಿ ಲೋಕಸಭೆ ಚುನಾವಣೆ ಎಂದರೆ ಇಡೀ ದೇಶಕ್ಕೆ ಒಂದು ಗುರಿ ಇರುತ್ತದೆ. ಜನ ಸಮುದಾಯ ಅದರ ಸುತ್ತ ಚಿಂತನೆ ನಡೆಸುತ್ತವೆ. ಜನ ಮತ ನೀಡುವಾಗ ಒಂದು ಅಥವಾ ಎರಡು ಪಕ್ಷಗಳ ಕಡೆ ಗಮನ ಹರಿಸುವುದು ಸಹಜ. ಸ್ವಾತಂತ್ರ್ಯ ಬಂದಾಗ ಹಲವು ಲೋಕಸಭೆ ಚುನಾವಣೆಗಳಲ್ಲಿ ಪೈಪೋಟಿ ಇರಲಿಲ್ಲ. ಕಾಂಗ್ರೆಸ್ ಹಾಗೂ ನೆಹರೂಗೆ ಪ್ರತಿಯಾಗಿ ನಿಲ್ಲುವ ಶಕ್ತಿ ಕಂಡು ಬಂದಿರಲಿಲ್ಲ. ಕ್ರಮೇಣ ಕೆಲವು ಕಡೆ ಮಾತ್ರ ಕಾಂಗ್ರೆಸ್‌ಗೆ ಪ್ರತಿರೋಧ ಕಂಡು ಬಂದಿತ್ತು. ನಿಜವಾದ ಪೈಪೋಟಿ ಆರಂಭಗೊಂಡಿದ್ದು ೧೯೭೭ ಚುನಾವಣೆಯಲ್ಲಿ. ತುರ್ತು ಪರಿಸ್ಥಿತಿ ನಂತರ ಚುನಾವಣೆ ಬಂದಿದ್ದರಿಂದ ಜಯ ಪ್ರಕಾಶ ನಾರಾಯಣ ನೇತೃತ್ವದಲ್ಲಿ ಪ್ರತಿಪಕ್ಷಗಳು ಒಂದುಗೂಡಿದವು. ಜನತಾ ಪಾರ್ಟಿ ತಲೆಎತ್ತಿತು. ಆದರೆ ದೇಶ ಉತ್ತರ-ದಕ್ಷಿಣ ಎಂದು ವಿಭಜನೆಗೊಳ್ಳುವ ಪ್ರಕ್ರಿಯೆ ಆರಂಭಗೊಂಡಿತು. ಉತ್ತರ ಭಾರತದ ಜನ ಒಂದು ರೀತಿ ಚಿಂತನೆ ನಡೆಸಿದರೆ ದಕ್ಷಿಣದವರು ಅದಕ್ಕೆ ತದ್ವಿರುದ್ದ ಚಿಂತನೆ ನಡೆಸುವುದು ಮುಂದುವರಿಯಿತು. ಹಿಂದಿ ಭಾಷೆ ಮಾತನಾಡುವವರ ರಾಜ್ಯಗಳಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ಕಂಡು ಬಂದರೆ ಬಿಜೆಪಿ ನಿಧಾನವಾಗಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತು. ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳು ಮುಂಚೂಣಿಗೆ ಬಂದವು. ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ, ಆಂಧ್ರದಲ್ಲಿ ತೆಲುಗುದೇಶಂ, ವೈಎಸ್‌ಆರ್ ಕಾಂಗ್ರೆಸ್, ತೆಲಂಗಾಣದಲ್ಲಿ ಬಿಆರ್‌ಎಸ್, ಕರ್ನಾಟಕದಲ್ಲಿ ಜೆಡಿಎಸ್, ಕೇರಳದಲ್ಲಿ ಎಲ್‌ಡಿಎಫ್ ಪ್ರಧಾನವಾಗುತ್ತಿದ್ದಂತೆ ಬಿಜೆಪಿ ಕಾಲಿಡುವುದು ಕಷ್ಟವಾಯಿತು. ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತು. ಪ್ರಾದೇಶಿಕ ಪಕ್ಷಗಳು ಬೆಳೆದಂತೆ ಉತ್ತರ-ದಕ್ಷಿಣದ ನಡುವೆ ಅಂತರ ಅಧಿಕಗೊಂಡಿತು.
ದಕ್ಷಿಣದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಅನುಮಾನದಿಂದ ನೋಡುತ್ತ ಬಂದಿವೆ. ಬಿಜೆಪಿ ಹಿಂದಿ ಭಾಷೆ ಪರ ಎಂಬ ಭಾವನೆ ಮೂಡಿದೆ. ಹಿಂದಿ-ಹಿಂದೂ-ಹಿಂದೂತ್ವ ಬಿಜೆಪಿಯ ಪ್ರಮುಖ ಸರಕಾಗಿವೆ. ಪ್ರಾದೇಶಿಕ ಪಕ್ಷಗಳು ಸ್ಥಳೀಯ ಭಾಷೆ, ಸ್ಥಳೀಯ ಧಾರ್ಮಿಕ ನಂಬಿಕೆ-ಸಮಾಜ ಸುಧಾರಣೆ ಸೇರಿದಂತೆ ವಿಭಿನ್ನ ದೃಷ್ಟಿಕೋನ ಕಂಡು ಬರುತ್ತಿದೆ. ದೇಶದ ಆದಾಯದ ಹಂಚಿಕೆಯಲ್ಲೂ ಉತ್ತರ-ದಕ್ಷಿಣದ ತಾರತಮ್ಯ ಎದ್ದು ಕಾಣುತ್ತಿದೆ. ಉತ್ತರ-ದಕ್ಷಿಣದ ನಡುವೆ ಕಂದಕ ಅಧಿಕಗೊಳ್ಳುತ್ತಿದೆ. ಬಿಜೆಪಿ ಕೇಂದ್ರೀಕೃತ ಅರ್ಥ ವ್ಯವಸ್ಥೆಗೆ ಒಲವು ತೋರುತ್ತಿದ್ದರೆ, ಕೇಂದ್ರ- ರಾಜ್ಯಗಳ ನಡುವೆ ಸುಮಧುರ ಸಂಬಂಧಕ್ಕೆ ಧಕ್ಕೆ ಒದಗಿ ಬರುತ್ತಿದೆ. ರಾಜ್ಯ ಸರ್ಕಾರಗಳ ಅಧಿಕಾರ ಇಳಿಮುಖಗೊಳ್ಳುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರ ಮೊಟಕುಗೊಳಿಸಲು ಯತ್ನಿಸುತ್ತಿದೆ. ಅಲ್ಲದೆ ಪ್ರಾದೇಶಿಕ ಪಕ್ಷಗಳ ಕತ್ತು ಹಿಸುಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯ ಮೂಲ ಕಾಂಗ್ರೆಸ್ ನಾಮಾವಶೇಷ. ಅದೇರೀತಿ ಇತರ ರಾಜಕೀಯ ಪಕ್ಷಗಳನ್ನು ನುಂಗುವ ಧೋರಣೆಯಲ್ಲಿದೆ. ಈಗ ತೋರಿಕೆಯಲ್ಲಿ ಮೈತ್ರಿಗಳು ನಡೆಯುತ್ತಿವೆ. ಇದು ಹೆಚ್ಚು ದಿನ ಉಳಿಯುವುದಿಲ್ಲ. ಜನತಾಪಕ್ಷ, ಅಕಾಲಿದಳ, ಬಿಎಸ್‌ಪಿ, ಜೆಡಿಎಸ್ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳು ಅಸ್ತಿತ್ವ ಕಳೆದುಕೊಂಡಿವೆ. ಟಿಎಂಸಿ, ವೈಎಸ್‌ಆರ್ ಪಕ್ಷ, ಟಿಆರ್‌ಎಸ್ ಪಕ್ಷಗಳನ್ನು ನುಂಗಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಮಹಾರಾಷ್ಟ್ರ, ಒಡಿಶಾ, ಆಂಧ್ರ, ಹರಿಯಾಣ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳ ಮೇಲೆ ವಕ್ರದೃಷ್ಟಿ ಬಿದ್ದಿದೆ. ಡಿಎಂಕೆ-ಅಣ್ಣಾ ಡಿಎಂಕೆ ಸಕಾಲಕ್ಕೆ ಎಚ್ಚೆತ್ತುಕೊಂಡಿವೆ. ಶಿವಸೇನಾ, ಎನ್‌ಸಿಪಿ, ಜೆಜೆಪಿ ಇನ್ನೂ ಕಣ್ಣು ಬಿಟ್ಟು ನೋಡಿಲ್ಲ. ಆರ್‌ಎಲ್‌ಡಿ, ಬಿಜೆಡಿ, ಟಿಡಿಪಿ ಇನ್ನೂ ನಿದ್ರಾವಸ್ಥೆಯಲ್ಲಿವೆ.
ಬಿಜೆಪಿ ೩೭೦ ಸೀಟು ಪಡೆಯುವ ಹವಣಿಕೆಯಲ್ಲಿದೆ. ಅಯೋಧ್ಯ- ಕಾಶಿ ಮಾತ್ರವಲ್ಲ, ದೇವಾಲಯಗಳ ಸಮೀಪ ಇರುವ ಮಸೀದಿಗಳಿಗೆ ವಿವಾದ ತಪ್ಪಿಲ್ಲ. ನಗರಗಳಲ್ಲಿ ರಸ್ತೆ ಮತ್ತು ಪ್ರದೇಶಗಳ ಹೆಸರು ಬದಲಾಗುವುದು ಸಾಮಾನ್ಯ. ಸಿಎಎ, ಏಕರೂಪ ನಾಗರಿಕ ಸಂಹಿತೆ, ಒಂದೇದೇಶ-ಒಂದೇ ಚುನಾವಣೆ ಮುಂಚೂಣಿಗೆ ಬರಲಿವೆ. ಒಕ್ಕೂಟ ವ್ಯವಸ್ಥೆ ಮತ್ತು ಸಂಸದೀಯ ಪದ್ಧತಿ ಮತ್ತಷ್ಟು ಕ್ಷೀಣಿಸಲಿದೆ. ಅಧ್ಯಕ್ಷೀಯ ಪದ್ಧತಿ ಮತ್ತು ಏಕ ವ್ಯಕ್ತಿಯಲ್ಲಿ ಅಧಿಕಾರ ಕೇಂದ್ರೀಕೃತಗೊಳ್ಳುವ ನಿಲುವು ಅಧಿಕಗೊಳ್ಳುತ್ತಿದೆ. ವಿಚಿತ್ರ ಎಂದರೆ ಇದನ್ನು ಸ್ವಾಗತಿಸುವವರೂ ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಸಮಾಜದ ಕೆಳಹಂತದಲ್ಲಿರುವವರ ಬಳಿ ಕೇವಲ ಶೇ.೩ ರಷ್ಟು ದೇಶದ ಸಂಪತ್ತು ಉಳಿದುಕೊಂಡಿದೆ. ಇತಿಹಾಸ ನಮಗೆ ಪಾಠ ಕಲಿಸಬೇಕು. ಚೀನಾ, ರಷ್ಯಾ, ಟಿರ್ಕಿ, ಇರಾನ್ ನಮ್ಮ ಮುಂದೆ ಇದೆ. ಅಮೆರಿಕ, ಆಫ್ರಿಕಾ ಇನ್ನೂ ಪಾಠ ಕಲಿತಿಲ್ಲ. ಇಡೀ ಜಗತ್ತು ಈಗ ಭಾರತದ ಚುನಾವಣೆಯನ್ನು ಆಸಕ್ತಿಯಿಂದ ನೋಡುತ್ತಿದೆ.