ಉಳ್ಳವರೇ ಭೂಮಿ ಒಡೆಯರು-ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಸಿದ್ದರಾಮಯ್ಯ
Advertisement

ಬೆಂಗಳೂರು: ಭೂ-ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದ ಬಿಜೆಪಿ ಸರ್ಕಾರ ರೈತರ ಕೃಷಿ ಭೂಮಿಯನ್ನು ಉಳ್ಳವರ ಪಾಲಾಗುವಂತೆ ಮಾಡಿದೆ. ಅಂದು ದೇವರಾಜ ಅರಸು ಸರ್ಕಾರ ಜಾರಿಗೆ ತಂದಿದ್ದ ಉಳುವವನೇ ಭೂಮಿಯ ಒಡೆಯ ಎಂಬುದನ್ನು ಬದಲಾಯಿಸಿದ ಬಿಜೆಪಿ ಉಳ್ಳವರೇ ಭೂಮಿಯ ಒಡೆಯರನ್ನಾಗಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕೇಸರಿ ಪಕ್ಷದ ವಿರುದ್ಧ ಹರಿಹಾಯ್ದರು.
ಗಾಂಧಿ ಭವನದಲ್ಲಿ ನವೀನ್ ಸೂರಿಂಜೆ ಅವರ ‘ಸದನದಲ್ಲಿ ಶ್ರೀರಾಮರೆಡ್ಡಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭೂ-ಸುಧಾರಣೆ ಕಾಯ್ದೆಯ ಕಲಂ ೭೯ ಎ, ಬಿ, ಸಿಗಳಿಗೆ ತಿದ್ದುಪಡಿ ತರುವ ಮೂಲಕ ಯಾರು ಬೇಕಾದರೂ ಎಷ್ಟು ಬೇಕಾದರೂ ಕೃಷಿ ಜಮೀನನ್ನು ಕೊಂಡುಕೊಳ್ಳುವಂತೆ ಅನುಕೂಲ ಕಲ್ಪಿಸಲಾಗಿದ್ದು, ಇದರಿಂದ ಬಡವರ ಫಲವತ್ತಾದ ಕೃಷಿ ಭೂಮಿ ಹಣವಂತರು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುವಂತಾಗಿದೆ ಎಂದು ಕಿಡಿ ಕಾರಿದರು.
ಭೂ-ಸುಧಾರಣೆ ಕಾಯ್ದೆಯ ಕಲಂ ೭೯ರ ಅಡಿಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ಬಿಜೆಪಿಯವರು ಹಣ ಪಡೆದುಕೊಂಡು ಮುಚ್ಚಿ ಹಾಕಿದರು. ಕಾಂಗ್ರೆಸ್ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸಿತು. ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಮಂದಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವುದರಲ್ಲಿ ಸಂದೇಹವಿಲ್ಲ. ಇಲ್ಲದಿದ್ದರೆ ಅದಾನಿ ಈ ಜಗತ್ತಿನ ಮೂರನೇ ಶ್ರೀಮಂತ ವ್ಯಕ್ತಿ ಎನ್ನಿಸಿಕೊಳ್ಳಲು ಆಗುತ್ತಿತ್ತೆ? ಎಂದು ವಿಪಕ್ಷ ನಾಯಕ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡರು.