ಎಚ್‌ಎಸ್‌ಆರ್‌ಪಿ ಅಳವಡಿಕೆ ಮೇ ೩೧ಕ್ಕೆ ಗಡುವು ಅಂತ್ಯ

Advertisement

ಬೆಂಗಳೂರು: ೨೦೧೯ಕ್ಕಿಂತ ಮೊದಲು ಖರೀದಿಸಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ರಾಜ್ಯ ಸಾರಿಗೆ ಇಲಾಖೆ ಮೇ ೩೧ರವರೆಗೆ ಎಚ್‌ಎಸ್‌ಆರ್‌ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಜೂನ್ ೧ರಿಂದ ಪೊಲೀಸ್ ಇಲಾಖೆ ಜತೆಗೂಡಿ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಈಗಾಗಲೇ ಎರಡು ಬಾರಿ ಗುಡುವು ವಿಸ್ತರಿಸಲಾಗಿದೆ. ಈ ಹಿಂದೆ ೨೦೨೩ರ ನವೆಂಬರ್ ೧೩ರೊಳಗೆ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆಗ ಕೇವಲ ೩೦,೦೦೦ ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರಿಂದ ಫೆಬ್ರವರಿ ೧೭ರ ವರೆಗೆ ಗಡುವನ್ನು ವಿಸ್ತರಿಸಲಾಯಿತು. ಆ ವೇಳೆಗೆ ೧೮ ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿದ್ದವು.
ಗುಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ನಂತರದಲ್ಲಿ ವಾಹನ ಮಾಲೀಕರು ನೋಂದಣಿ ಪ್ರಮಾಣ ಹೆಚ್ಚಾಗಿ ೧೮ ಲಕ್ಷಕ್ಕೆ ತಲುಪಿದೆ. ಈಗ ೫೨ ಲಕ್ಷ ವಾಹನಗಳ ನೋಂದಣಿಯಾಗಿದೆ.
ಎರಡನೇ ತಿಂಗಳಲ್ಲಿ ೩೪ ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, ಇನ್ನೂ ೧.೪೮ ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ. ಗಡುವಿನೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮತ್ತೊಮ್ಮೆ ಗಡುವು ವಿಸ್ತರಿಸಬಹುದು. ಗಡುವು ವಿಸ್ತರಣೆಯಾಗದಿದ್ದರೆ ವಾಹನಗಳಿಗೆ ೫೦೦ ರಿಂದ ೧೦೦೦ ರೂ. ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.