ಎಚ್. ಡಿ. ರೇವಣ್ಣ ಧರ್ಮಸ್ಥಳದಲ್ಲಿ ವಿಶೇಷ ಪ್ರಾರ್ಥನೆ

Advertisement

ಮಂಗಳೂರು: ಜೆಡಿಎಸ್ ನಾಯಕ, ಶಾಸಕ ಎಚ್.ಡಿ. ರೇವಣ್ಣ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಭೇಟಿ ನೀಡಿ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅವರು ತಮ್ಮ, ಮಕ್ಕಳಾದ ಪ್ರಜ್ವಲ್, ಸೂರಜ್ ಹಾಗೂ ಪತ್ನಿ ಭವಾನಿ ಹೆಸರಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಪೂಜೆ ಬಳಿಕ ಸುಮಾರು ೨೦ ನಿಮಿಷ ಮಂಜುನಾಥ ಸ್ವಾಮಿ ದೇವರ ಮುಂದೆ ಕೈಮುಗಿದು ಕಣ್ಣು ಮುಚ್ಚಿ ಧ್ಯಾನಿಸಿದರು. ಬಳಿಕ ಅಮ್ಮನವರ ಮುಂದೆ ರೇವಣ್ಣ ಸುಮಾರು ೧೫ ನಿಮಿಷ ಧ್ಯಾನದಲ್ಲಿ ನಿರತರಾದರು. ಬಳಿಕ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.
ನ್ಯಾಯಾಲಯದ ಮೇಲೆ ನಂಬಿಕೆ ಇದೆ :
ಈ ಸಂದರ್ಭ ತನ್ನನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘೪೦ ವರ್ಷಗಳಿಂದ ರಾಜಕಾರಣಿದಲ್ಲಿದ್ದೇನೆ. ೨೫ ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಾನೂನು ಬಗ್ಗೆ ಗೌರವವಿದೆ ದೇವರ ಬಗ್ಗೆ ನಂಬಿಕೆಯಿದೆ. ನನ್ನ ವಿರುದ್ಧ ದಾಖಲಾಗಿರುವ.ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದ ಜನತೆ ಮೇಲೆ ಹಾಗೂ ನ್ಯಾಯಾಲಯದ ಮೇಲೆ ನಂಬಿಕೆ ಇದೆ ’ ಎಂದರು. ’ಮಂಜುನಾಥ ಸ್ವಾಮಿ ಮೇಲೆ ನನಗೆ ನಂಬಿಕೆಯಿದೆ. ವಿಶೇಷ ದಿನವಾದ ಸೋಮವಾರ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದೇನೆ’ ಎಂದು ತಿಳಿಸಿದರು. ’ಹಾಸನ ಚಲೋ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ಎಚ್.ಡಿ.ದೇವೆಗೌಡರು ಪತ್ರ ಬರೆದಿರುವ ಬಗ್ಗೆಯೂ ಗೊತ್ತಿಲ್ಲ. ಉಳಿದ ಯಾವುದರ ಬಗ್ಗೆಯೂ ಸದ್ಯ ಪ್ರತಿಕ್ರಿಯೆ ನೀಡಲಾರೆ’ ಎಂದರು. ಹಾಸನದಿಂದ ಭಾನುವಾರ ರಾತ್ರಿಯೇ ಕಾರಿನಲ್ಲಿ ಬಂದು ಧರ್ಮಸ್ಥಳದ ವಸತಿ ಗೃಹವೊಂದರಲ್ಲಿ ವಾಸ್ತವ್ಯ ಮಾಡಿದ್ದರು.