ಎಫ್‌ಎಂಸಿಜಿ ವಲಯಕ್ಕೆ ದುರಿತ ಕಾಲ

Advertisement

ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕ(ಜನವರಿ-ಮಾರ್ಚ್) ಅವಧಿಯಲ್ಲಿ ದೇಶೀಯ ಎಫ್‌ಎಂಸಿಜಿ ವಲಯದ ಮಾರಾಟ ವಹಿವಾಟು ಶೇ.೪.೧ಕ್ಕೆ ಇಳಿಮುಖವಾಗಿದೆ. ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಸಿರುವದು ಹಾಗೂ ಗ್ರಾಮೀಣ ಭಾಗದಲ್ಲಾದ ಬೇಡಿಕೆ ಕುಸಿತವೇ ಇದಕ್ಕೆ ಕಾರಣ ಎಂದು ಖ್ಯಾತ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನೀಲ್‌ಸನ್‌ಐಕ್ಯೂ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಗ್ರಾಮೀಣ ಭಾಗದಲ್ಲಿ ಎಫ್‌ಎಂಸಿಜಿ(ತ್ವರಿತವಾಗಿ ಮಾರುಕಟ್ಟೆಗೆ ಬರುವ ಗ್ರಾಹಕ ಉತ್ಪನ್ನಗಳು-ಸಾಬೂನು, ಟೂಥ್‌ಪೇಸ್ಟ್, ಟೂಥ್‌ಬ್ರಷ್, ಬಿಸ್ಕತ್, ಕಸಬರಿಗೆ, ಸುಗಂಧದ್ರವ್ಯ, ಸೂಜಿ, ಸಣ್ಣ ಕರಂಡಕ, ಚಾಕಲೇಟ್, ಸ್ನ್ಯಾಕ್‌ಗಳು ಇತ್ಯಾದಿ) ಮಾರಾಟ ಶೇ.೫.೩ಕ್ಕೆ ಕುಸಿದಿದೆ. ಎಫ್‌ಎಂಸಿಜಿ ಉತ್ಪನ್ನಗಳ ಬಳಕೆಗೆ ಸಂಬಂಧಿಸಿದಂತೆ ಕಳೆದ ಮೂರು ತ್ರೈಮಾಸಿಕ ಅವಧಿಗಳಲ್ಲೇ ಇದು ಅತ್ಯಂತ ಮಂದಗತಿಯ ಬೆಳವಣಿಗೆಯಾಗಿದೆ. ಉತ್ಪನ್ನಗಳ ಬೆಲೆ ಏರಿಕೆ ವಿಷಯದಲ್ಲಿ ಗ್ರಾಮೀಣ ಭಾಗದಲ್ಲಿ ಶೇ.೧೧.೯ರಷ್ಟಾಗಿದ್ದರೆ, ನಗರ ಮಾರುಕಟ್ಟೆಯಲ್ಲಿ ಶೇ.೮.೮ರಷ್ಟಿದೆ. ಆಹಾರ ಪದಾರ್ಥ ಹಾಗೂ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದು, ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಮುಂಗಾರು ಸಮರ್ಪಕವಾಗಿದ್ದರೆ ಮುಂದೆ ಮಾರಾಟ ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಬೆಲೆ ಏರಿಕೆಯ ಇಂದಿನ ಕಾಲದಲ್ಲಿ ಜನರು ಅವಶ್ಯಕ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಖರೀದಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಉಳಿದಂತೆ ಆಹಾರೇತರ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಬಿಗಿ ಹಿಡಿತ ಅನುಸರಿಸುತ್ತಿದ್ದಾರೆ. ಸಣ್ಣ ಗಾತ್ರದ ಎಫ್‌ಎಂಸಿಜಿ ಉತ್ಪನ್ನಗಳ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ಸಣ್ಣ ಗಾತ್ರದ ಪ್ಯಾಕ್‌ನಲ್ಲಿರುವ ಸ್ನ್ಯಾಕ್‌ಗಳು, ಚಾಕಲೇಟ್, ಬಿಸ್ಕತ್‌ಗಳ ಮಾರಾಟ ಹೆಚ್ಚಾಗಿದ್ದು, ಶೇ.೧.೫ರಷ್ಟು ವೃದ್ಧಿಯಾಗಿದೆ. ಉಳಿದಂತೆ ಆಹಾರೇತರ ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟ ಶೇ.೯.೬ಕ್ಕೆ ಇಳಿಕೆಯಾಗಿದೆ.