ಎಫ್‌ಐಆರ್‌ಗೆ ತಡೆಯಾಜ್ಞೆ: ನೋಟಿಸ್ ಬಂದರೆ ಉತ್ತರ ಕೊಡುವೆ

Advertisement

ಚಿತ್ರದುರ್ಗ: ಭೂ ಕಬಳಿಕೆ, ಜಾತಿನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ಉತ್ತರ ನೀಡುತ್ತೆನೆ ಮಹಿಳೆ ನೀಡಿರುವ ಎಫ್‌ಐಆರ್‌ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸಂವಿಧಾನ ಪೀಠಿಕೆ ಓದಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಹೈಕೋರ್ಟ್‌ನಲ್ಲಿ ಈಗಾಗಲೇ ಪ್ರಕರಣವನ್ನೆ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು ಈಗ ಎಫ್‌ಐಆರ್‌ಗೆ ತಡೆಯಾಜ್ಞೆ ಸಿಕ್ಕಿದೆ ಎಂದರು.
ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಮೊಸರಲ್ಲಿ ಕಲ್ಲು ಹುಡುಕಿದರೆ ಯಶಸ್ವಿ ಆಗಲು ಸಾಧ್ಯವಿಲ್ಲ. ಸತ್ಯ ಯಾವತ್ತಿದ್ದರೂ ಗೆಲ್ಲಲೇಬೇಕು. ಸತ್ಯಾಂಶ ತಿಳಿಯದೆ, ದಾಖಲೆ ನೋಡದೆ ವಿನಾಕಾರಣ ಆರೋಪ ಮಾಡಲಾಗಿದೆ. ಕೆಲವರ ಬಳಿ ನಾನು ವೈಯಕ್ತಿಕವಾಗಿ ಮಾತನಾಡಿದ್ದೆನೆ ರಾಜಕೀಯಕ್ಕಾಗಿ ಮಾತಾಡುತ್ತೇವೆ ಎನ್ನುತ್ತಾರೆ. ಬಿಜೆಪಿ, ಜೆಡಿಎಸ್ ಕೆಲ ಸ್ನೇಹಿತರ ಜತೆ ಕೂಡ ಮಾತಾಡಿದ್ದೆನೆ. ಈ ಪ್ರಕರಣದಲ್ಲಿ ಸುಧಾಕರ್ ತಪ್ಪೇನಿಲ್ಲ ಎಂದು ಗೊತ್ತಿದೆ. ಪ್ರಜಾಪ್ರಭುತ್ವ ಶಕ್ತಿಯುತವಾಗಿದೆ. ತಪ್ಪು ಮಾಡಿದರೆ ಒಂದು ಕ್ಷಣ ಇರಲಾಗದು. ಎಷ್ಟೋ ಜನ ಅಪರಾಧಿಗಳು ತಪ್ಪಿಸಿಕೊಳ್ಳಲಿ, ಓರ್ವ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಹೇಳಿದರು.
೬೦ ವರ್ಷದ ಜೀವನದಲ್ಲಿ ಜನರು ಗಮನಿಸಿದ್ದಾರೆ. ನಾಲ್ಕು ಸಲ ಈ ಜಿಲ್ಲೆಯಲ್ಲಿ ಜನ ನನ್ನನು ಗೆಲ್ಲಿಸಿದ್ದಾರೆ. ಅಲ್ಪ ಸಂಖ್ಯಾತನಾಗಿದ್ದರೂ ಪ್ರಾಮಾಣಿಕತೆಣ ಸೇವೆ ಗುರುತಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ೨೦೦೮ರಲ್ಲಿ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವ ಆಗಿದ್ದೆ. ಆಗ ಸಿಬಿಐ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಬಿಜೆಪಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿತ್ತಾ?. ರಾಜಕಾರಣಕ್ಕಾಗಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಸಿಎಂ, ಡಿಸಿಎಂ, ಗೃಹ ಸಚಿವರನ್ನು ಭೇಟಿ ಮಾಡಿದ್ದೇನೆ. ನಾನು ಪಾರದರ್ಶಕವಾಗಿದ್ದು ನನಗೆ ಭಯವೇಕೆ?. ಯಾವುದೇ ಭಯ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವರ ಮೊರೆ: ಇನ್ನೂ ಸುಧಾಕರ್ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಎಫ್‌ಐಆರ್ ಆದ ಮೇಲೆ ಇದು ಮೊದಲ ಭೇಟಿಯಾಗಿದೆ. ಆದರೆ ಸುಧಾಕರ್ ಈ ಬಗ್ಗೆ ಪ್ರತಿಕ್ರಿಯಿಸಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದರ್ಶನ ಮಾಡಿದ್ದೇನೆ. ಬರಗಾಲ ತೊಲಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.