ಎಫ್‌ಡಿಎ ಪರೀಕ್ಷೆ ಅಕ್ರಮ: ಉನ್ನತ ಮಟ್ಟದ ತನಿಖೆಗೆ ಸರ್ಕಾರ ಸಿದ್ಧ

Advertisement

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ಆದರೆ ಪರೀಕ್ಷೆ ಕೇಂದ್ರದೊಳಗೆ ಯಾವುದೇ ಅಕ್ರಮ ನಡೆದಿಲ್ಲ. ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪಂಚಾಯತರಾಜ್ ಮತ್ತು ಇಂಜಿನಿಯರಿಂಗ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ಲಾಸ್ಟಿಕ್ ಮುಕ್ತ ಕಲಬುರಗಿ ಮತ್ತು ಹೆಡ್‌ಹೆಲ್ಡ್ ಸಂಸ್ಥೆಯೊಂದಿಗೆ ಕೌಶಲ್ಯ ತರಬೇತಿ ಒಪ್ಪಂದ ಮಾಡಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅಕ್ರಮ, ಲೋಪವಾಗಿಲ್ಲ ಎಂದು ಅಲ್ಲಗಳೆಯಲು ಸಾಧ್ಯವಿಲ್ಲ, ಕೆಲವೊಂದು ಸಣ್ಣ ಪುಟ್ಟ ಲೋಪಗಳಾಗಿರುವುದು ನಿಜ. ಶೇ. ೧೦೦ಕ್ಕೆ ನೂರರಷ್ಟು ಸೋರಿಕೆಯಾಗಿಲ್ಲ. ಇನ್ನು ಯಾರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಕಂಡುಬಂದರೆ ತನಿಖೆ ಗುರಿಗೊಳಪಡಿಸಲಾಗುವುದು ಎಂದರು. ಪ್ರತಿ ಆಯಮದಿಂದಲೂ ತನಿಖೆ ಚುರುಕುಗೊಳಿಸಲಾಗುವುದು ಎಂದರು.

ಆರ್.ಡಿ. ಪಾಟೀಲ್ ಶೀಘ್ರ ಬಂಧನ: ಎಫ್‌ಡಿಎ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಆರ್.ಡಿ. ಪಾಟೀಲ್ ಮತ್ತು ಆಸೀಫ್ ಭಾಗವಾನ್ ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ಇಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಬರುವುದಿಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೂ, ಈಗಲೂ ಒಂದೇ ನಿಲುವು ತಳಿದಿದೆ. ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇದೇ ಮೊದಲ ಬಾರಿಗೆ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಬಳಸಲಾಗಿದೆ. ಮುಂಜಾಗ್ರತೆವಹಿಸಿದ್ದರಿಂದಲೇ ಅಕ್ರಮಕ್ಕೆ ಕಡಿವಾಣ ಬಿದ್ದಂತಾಗಿದೆ ಎಂದರು. ಹೀಗಾಗಿ, ಹಿಂದಿನ ಬಿಜೆಪಿ ಸರ್ಕಾರಕ್ಕೂ ಮತ್ತು ನಮ್ಮ ಸರ್ಕಾರಕ್ಕೂ ಹೊಲಿಕೆ ಮಾಡಬೇಡಿ. ಹಿಂದಿನ ಸರ್ಕಾರ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿತ್ತು. ಅಷ್ಟೇ ಅಲ್ಲದೆ, ಇಬ್ಬರು ಸಚಿವರು ಸಹ ಅಕ್ರಮದಲ್ಲಿ ಭಾಗಿಯಾಗಿದ್ದರು. ಅರ‍್ಯಾಕೆ ಸಿಬಿಐ ತನಿಖೆಗೆ ಒಪ್ಪಿಸಲಿಲ್ಲ, ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಐಪಿಎಸ್ ಅಧಿಕಾರಿ ಬಂಧಿಸಲಾಗಿತ್ತಲ್ಲ. ಕೊನೆಗೂ ತಾರ್ಕಿಕ ಅಂತ್ಯ ತರಲಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಅಸ್ತಿತ್ವಕ್ಕೆ ಮಾಧ್ಯಮಗಳ ಮುಂದೆ ಬರಬೇಡಿ: ಬಿಜೆಪಿ ರಾಜ್ಯ ವಕ್ತಾರ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಖರ್ಗೆ, ಗಾಳಿಯಲ್ಲಿ ಗುಂಡು ಹಾರಿಸುವುದಲ್ಲ, ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಮಾಧ್ಯಮಗಳ ಮುಂದೆ ಬರಬೇಡಿ ಎಂದು ಕುಟುಕಿದರು.

ಬಿಜೆಪಿ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ರಾಜ್ಯ ಬಿಜೆಪಿ ನಾಯಕರಿಗೆ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ, ರಾಜ್ಯ ಬಿಜೆಪಿ ನಾಯಕತ್ವ ಬಗ್ಗೆ ಹಗುರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ತಮ್ಮ ಮನೆ ಶುದ್ಧ ಮಾಡಿಕೊಳ್ಳಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಟಾಂಗ್ ನೀಡಿದಲ್ಲದೆ, ರಾಜ್ಯ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ವಿಪಕ್ಷ ಸ್ಥಾನ ನಾಯಕರ ನೇಮಕ ಮಾಡುವ ಸಾಮರ್ಥ್ಯ ಬಿಜೆಪಿ ನಾಯಕರಿಲ್ಲ ಎಂದು ಟೀಕಿಸಿದರು.