ಎಫ್‌ಡಿಎ ಪರೀಕ್ಷೆ ಅಕ್ರಮ: ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದನಾ ಆರ್.ಡಿ.?

Advertisement

ಭೀಮಾಶಂಕರ ಫಿರೋಜಾಬಾದ
ಕಲಬುರಗಿ: ಇದನ್ನು ಪೊಲೀಸ್ ವೈಫಲ್ಯವೆನ್ನಬೇಕೋ? ಅಥವಾ ಪೊಲೀಸರೇ ಅಪರಾಧಿಗೆ ಸಹಕಾರ ನೀಡುತ್ತಿದ್ದಾರೋ?, ಎಫ್‌ಡಿಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ನಗರದಲ್ಲಿಯೇ ಎರಡು ದಿನ ಇದ್ದರೂ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದನ್ನು ನೋಡಿದರೆ ಇಂಥ ಅನುಮಾನ ಮೂಡದೇ ಇರದು.
ಆರ್.ಡಿ. ಪಾಟೀಲ್ ನಗರದಲ್ಲಿರುವ ಸಣ್ಣ ಸುಳಿವು ಕೂಡ ಪೊಲೀಸರಿಗೆ ಸಿಗುವುದಿಲ್ಲವೆಂದರೆ ಏನರ್ಥ?, ಈಗ ಸಾರ್ವಜನಿಕರು ಖಾಕಿಪಡೆಯ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರಮುಖ ಜನನಿಬಿಡ ಪ್ರದೇಶವಾದ, ಕೇಂದ್ರಸ್ಥಾನದಲ್ಲಿರುವ ಜೇವರ್ಗಿ ರಸ್ತೆಯ ವರ್ದಾ ಅಪಾರ್ಟ್ಮೆಂಟ್‌ನಲ್ಲಿ ತಂಗಿರುವ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕ ದೃಶ್ಯಾವಳಿಗಳು ಪೊಲೀಸರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿವೆ.
ಕಳೆದ ಅಕ್ಟೋಬರ್ ೨೮ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಹಿರಿಯ ಸಹಾಯಕ (ಎಫ್‌ಡಿಎ) ಹುದ್ದೆಗಳ ಭರ್ತಿಗಾಗಿ ನಡೆದ ಪರೀಕ್ಷೆಯಲ್ಲಿ ಅಕ್ರಮವಾಗಿ ಬ್ಲೂಟೂತ್ ಡಿವೈಸ್ ಬಳಸಿ ಉತ್ತರ ಹೇಳಲು ಮುಂದಾಗಿದ್ದ ಆರ್.ಡಿ. ಪಾಟೀಲ್ ಗ್ಯಾಂಗ್ ಈಗ ಕಂಬಿ ಎಣಿಸುತ್ತಿದೆ. ಆದರೆ ಕಿಂಗ್‌ಪಿನ್ ಆರ್.ಡಿ. ಮಾತ್ರ ಯಾರ ಕೈಗೂ ಸಿಗದೆ ಅಥವಾ ಸುಳಿವು ಸಿಕ್ಕ ತಕ್ಷಣ ಆರ್‌ಡಿ ಪಾಟೀಲ್ ತಪ್ಪಿಸಿಕೊಂಡು ಹೋಗಲು ದಾರಿ ಮಾಡಿಕೊಟ್ಟರಾ? ಎಂಬುದು ಗುಮಾನಿ ಎದ್ದಿದೆ.

ಪರಾರಿಯಾದ ದೃಶ್ಯ ಸೆರೆ
ಆರ್.ಡಿ. ಪಾಟೀಲ್ ಕಳೆದ ಭಾನುವಾರದಿಂದ ಸೋಮವಾರದವರೆಗೆ ತಂಗಿದ್ದ ವರ್ದಾ ಅಪಾರ್ಟ್ಮೆಂಟ್‌ನಲ್ಲಿ ಮನೆಯೊಂದನ್ನು ಪರೀಕ್ಷೆಗಿಂತ ಒಂದು ತಿಂಗಳ ಮುಂಚೆ ಬಾಡಿಗೆ ಪಡೆದಿದ್ದ ಎಂಬ ಮಾಹಿತಿ ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಆರ್‌ಡಿ ಪಾಟೀಲ್ ಪರಾರಿಯಾಗಿದ್ದಾನೆ. ಅಪಾರ್ಟ್ಮೆಂಟ್‌ನ ಹಿಂಬದಿಯ ಕಾಂಪೌಂಡ್ ಹಾರಿ ಪರಾರಿಯಾಗಿರೋ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಂಪೌಂಡ್‌ಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಹಾರಿ ಓಡಿ ಹೋಗಿದ್ದಾನೆ.

ಮಧ್ಯಾಹ್ನ ೩ ಗಂಟೆಗೆ ಬೇಲ್ ಅರ್ಜಿ ವಿಚಾರಣೆ
ಅಕ್ರಮದ ಕಿಂಗ್‌ಪಿನ್ ಆರ್ ಡಿ ಪಾಟೀಲ್ ಜಾಮೀನಿಗಾಗಿ ಕಲಬುರಗಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನ ೩ ಗಂಟೆ ಒಳಗಾಗಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಒಂದು ವೇಳೆ ಜಾಮೀನು ಅರ್ಜಿ ವಜಾಗೊಂಡರೆ ಕೋರ್ಟ್ ಮುಂದೆ ಶರಣಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಆರ್.ಡಿ. ಪಾಟೀಲ್‌ನ ಕೃಪಾಕಟಾಕ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವರು ಸಾಥ್ ನೀಡಿದ್ದಾರೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ.

ಕಿಂಗ್‌ಪಿನ್ ಆರ್.ಡಿ. ಪಾಟೀಲ್ ತಲೆಮರೆಸಿಕೊಂಡ ಬಳಿಕ ಎಚ್ಚೆತ್ತುಕೊಂಡಂತಿರುವ ಪೊಲೀಸ್ ತಂಡ ಈಗ ಚುರುಕುಗೊಂಡು ಫೀಲ್ಡಿಗಿಳಿದಿದೆ.

ಉತ್ತರ ಪ್ರದೇಶಕ್ಕೆ ಕಳುಹಿಸಲಾದ ವಿಶೇಷ ಪೊಲೀಸ್ ತಂಡವನ್ನು ವಾಪಸ್ ಕರೆಸಿಕೊಂಡು, ಆ ತಂಡವನ್ನೇ ರದ್ದು ಮಾಡಲಾಗಿದೆ. ಇನ್ನು ಆರ್.ಡಿ. ಪಾಟೀಲ್ ಅವರನ್ನು ಬಂಧಿಸುವಲ್ಲಿನ ಪೊಲೀಸ್ ವೈಫಲ್ಯ, ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆದಿದೆ.
ಚೇತನ್ ಆರ್. ನಗರ ಪೊಲೀಸ್ ಆಯುಕ್ತರು