ಎರಡೇ ವರ್ಷದಲ್ಲಿ ಮಹದಾಯಿ ಯೋಜನೆ ಪೂರ್ಣ: ಕಾಂಗ್ರೆಸ್ ನಾಯಕರ ವಾಗ್ದಾನ

ಮಹದಾಯಿ
Advertisement

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ನಿರ್ಲಕ್ಷ್ಯ ಧೋರಣೆ ಖಂಡಿಸಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಹದಾಯಿ ಜಲ-ಜನಾಂದೋಲನ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ರಣಕಹಳೆ ಊದಿದರು.
2023ರ ಚುನಾವಣೆಯಲ್ಲಿ ರಾಜ್ಯದ ಜನಾಶೀರ್ವಾದದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಮೂರು ಸಾವಿರ ಕೋಟಿ ಆದರೂ ಸರಿ ಎರಡೇ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಕನಸು ನನಸು ಮಾಡುವುದಾಗಿ ವಾಗ್ದಾನ ನೀಡಿದರು.
ಯೋಜನೆ ವ್ಯಾಪ್ತಿ ಪ್ರದೇಶದ ಗದಗ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಒಟ್ಟು 20 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಿಂದ ಬಂದಿದ್ದ ರೈತರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳ ಸಮ್ಮುಖದಲ್ಲಿ ಬಿಜೆಪಿ ಸರ್ಕಾರದ ಅಸಡ್ಡೆ ಧೋರಣೆ ಪರಮಾವಧಿಯನ್ನು ಬಿಚ್ಚಿಟ್ಟರು.
ಈವರೆಗೆ ಡಬಲ್ ಎಂಜಿನ್ ಸರ್ಕಾರ ಎಂದು ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ನಾಲ್ಕು ಎಂಜಿನ್ ಸರ್ಕಾರ (ಕೇಂದ್ರ, ರಾಜ್ಯ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ) ಇದ್ದರೂ ಮಹದಾಯಿ ನೀರು ಕೊಡಲು ಆಗಿಲ್ಲ, ನಾಚಿಕೆ ಆಗಲ್ವಾ ನಿಮ್ಗೆ ಎಂದು ಮೂದಲಿಸಿದರು.