ಎಲ್ಲ ದೈವಕೆ ನಿಮ್ಮ ಮೆಲ್ಲಡಿಯೇ ಘನ

Annadanishwara Swami
Advertisement

ಈ ಜಗತ್ತಿನಲ್ಲಿ ಅನಂತ ದೈವಗಳದ್ದಾವೆ. ಅಸಂಖ್ಯ ದೇವತೆಗಳ ಆರಾಧನೆ ನಡೆಯುತ್ತಿದೆ. ಆದರೆ ಈ ದೇವರು ಮಾತನಾಡುವುದಿಲ್ಲ. ಆದರೆ ದೇವರೇ ಗುರು ರೂಪದಲ್ಲಿ ಮಾತನಾಡಿ, ಯೋಗಕ್ಷೇಮವನ್ನು ಕೇಳಿ ಸಂತೈಸುತ್ತಾನೆ.
ಎಲ್ಲರಿಗೂ ಗುರು ಬೇಕು ಗುರುದೇವನೇ ಸರ್ವಶ್ರೇಷ್ಠನು `ನ ಗುರೋರಧಿಕಂ’ ಎಂದು ವೇದವೇ ಸಾರಿದೆ. ಗುರುನಾಥನಿಗಿಂತ ದೊಡ್ಡವನು ಯಾವನೂ ಇಲ್ಲ. ಬಾಹ್ಯದೇವರ ಆರಾಧನೆ ಏಕಮುಖವಾಗಿರುತ್ತದೆ. ಇಲ್ಲಿ ಆಡಂಬರ ಇರುತ್ತದೆ. ಎಲ್ಲ ದೈವಗಳಿಗಿಂತ ಸದ್ಗುರುನಾಥನ ಮೆಲ್ಲಡಿಯ ಪಾವನವಾದುದು. ಸೇವೆಗೈಯಲು ಯೋಗ್ಯವಾಗುವದು.
ಆಪ್ತ, ಅಂಗ, ಸ್ಥಾನ, ಸದ್ಭಾವ ಎಂಬ ನಾಲ್ಕು ವಿಧವಾದ ಸೇವೆಗಳಿಂದ ಸದ್ಗುರುನಾಥನನ್ನು ಸಂತುಷ್ಠಗೊಳಿಸಲು ಸಾಧ್ಯವೆಂದು ಹೇಳಲಾಗುತ್ತಿದೆ. ಗುರು ಸಂತುಷ್ಠನಾಗುವರೆಗೂ ಸೇವೆ ಮಾಡಿ ಆತನ ಕರುಣಾ ಕಾಟಕ್ಷಕ್ಕೆ ಪಾತ್ರವಾಗುವುದು. ಹಾಗೇ ಗುರುಕರುಣೆಗೆ ಪಾತ್ರವಾದ ಮೇಲೆ ಆತನಿಗೆ ತನಗನಿಸಿದ ವಿದ್ಯೆಯನ್ನು ಗುರುವಾದವನು ಧಾರೆ ಎರೆಯುತ್ತಾನೆ.
ಮತ್ತೊಂದು ಸೇವಾ ಮನೋಭಾವ ದೈಹಿಕ ಕಾಳಜಿ ಅತ್ಯೇವಾಸಿನ ಎನ್ನುವವನು ಮಾಡಿ ಗುರುವಿನ ಕರುಣೆಯನ್ನು ಪಡೆಯುತ್ತಾನೆ. ಆ ನಂತರದಲ್ಲಿ ಗುರುವಿನ ಸ್ಥಾನಕ್ಕೆ ಗೌರವವನ್ನು ನೀಡಿ ಯಾವಾಗಲೂ ಆತನ ಗುರುವಿನ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾನೆ. ಇಂಥವನಿಗೂ ಗುರುವಿನ ಕರುಣೆಯಾಗುತ್ತದೆ. ಅದಲ್ಲದೆ ಸದ್ಭಾವ ಎಂದರೆ ಉತ್ತಮ ಗುಣಭಾವಗಳಿಂದ ಗುರು ಪ್ರೀತನಾಗುತ್ತಾನೆ. ಆತನ ಪವಿತ್ರಾತ್ಮವನ್ನು ಧ್ಯಾನಿಸುವದರಿಂದಲೂ ಕೂಡ ಗುರು ಕಾರುಣ್ಯ ಒದಗುತ್ತದೆ. ಹೀಗೆ ನಾಲ್ಕು ಸೇವೆಗಳಿಂದ ಸಂತುಷ್ಟಗೊಂಡ ಗುರುನಾಥನು ಆನಂದದಿಂದ ಆಶೀರ್ವದಿಸುತ್ತಾನೆ. ಬಸವಲಿಂಗ ಶರಣರು
ಜೀವ ಜಾಲಂಗಳೊಳಗಾವನಾದೊಡೆ ನೀನಂ
ಕೈವಿಡಿದವನೇ ಪಾವನಾತ್ಮಕ ಗುರುಂ
ದೇವ ನಿನೆನಗೆ ಕೃಪೆಯಾಗು…….
ಸಕಲ ಜೀವರಾಶಿಗಳಲ್ಲಿ ಗುರುಕೃಪೆಗೆ ಪಾತ್ರನಾದವನು ಪಾವನಾತ್ಮಕನಾಗುವನೆಂದು ನಿರೂಪಿಸಿದ್ದಾರೆ. ಕಾರಣ ಗುರುಸೇವೆ. ಗುರುಪಾದ ಸೇವೆ ಮಾಡವುದು ಅತ್ಯಂತ ಶ್ರೇಷ್ಠವಾದ ಸನ್ಮಾರ್ಗವಾಗಿದೆ ಅಲ್ಲದೇ ಮೋಕ್ಷದಾಯಕವೂ ಆಗಿದೆ.