ಎಸ್ಟಿ ಮತ ಕೈತಪ್ಪುವ ಕಾರಣಕ್ಕೆ ಬಿಜೆಪಿ ಮೀಸಲಾತಿಜಾರಿ ಮಾಡಿದೆ

ಸತೀಶ ಜಾರಕಿಹೊಳಿ
Advertisement

ದಾವಣಗೆರೆ: ಪರಿಶಿಷ್ಟ ಪಂಗಡದ ಮೇಲಿನ ಪ್ರೀತಿಯಿಂದ ಬಿಜೆಪಿ ಸರ್ಕಾರ ಎಸ್ಟಿ ಮೀಸಲಾತಿ ನೀಡಿಲ್ಲ. ಈ ಸಮುದಾಯ ಎಲ್ಲಿ ಕೈಕೊಡುತ್ತದೋ ಎಂಬ ಭಯ ಹಾಗೂ ರಾಜನಹಳ್ಳಿ ಶ್ರೀಗಳ ನಿರಂತರ ಹೋರಾಟದಿಂದ ಮೀಸಲಾತಿ ಸಿಕ್ಕಿದೆ ಹೊರತು ಪರಿಶಿಷ್ಟರ ಮೇಲಿನ ಕಾಳಜಿಯಿಂದಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹರಿಹರ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಎಸ್ಟಿ ಸಮುದಾಯದ ಸಚಿವರು, ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಶ್ರೀಗಳ ೨೭೪ ದಿನಗಳ ನಿರಂತರ ಹೋರಾಟ ಹಾಗೂ ಮತ ಕೈತಪ್ಪುವ ಕಾರಣದಿಂದ ಬಿಜೆಪಿ ಸರ್ಕಾರ ಮೀಸಲಾತಿ ನೀಡಿದೆ. ಹಾಗೆಂದ ಮಾತ್ರಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ಮೀಸಲಾತಿ ನೀಡಿದೆಯೆಂದು ಮರುಳಾಗಬೇಡಿ ಎಂದು ಸಲಹೆ ನೀಡಿದರು.

ಎಸ್ಟಿ ಸಮುದಾಯಕ್ಕೆ ಬಿಜೆಪಿ ಪ್ರೀತಿಯಿಂದಂತೂ ಮೀಸಲಾತಿ ನೀಡಿಲ್ಲ. ಚುನಾವಣೆಯಲ್ಲಿ ಈ ಸಮುದಾಯ ಕೈಕೊಡಬಹುದೆಂಬುದು ಒಂದು ಕಾರಣವಾದರೆ, ಶ್ರೀಗಳ ನಿರಂತರ ಹೋರಾಟ ಮತ್ತೊಂದು ಕಾರಣಕ್ಕಾಗಿ ನಮ್ಮ ಸಮುದಾಯಕ್ಕೆ ಮೀಸಲಾಗಿ ಸಿಕ್ಕಿದೆ ಎಂದರು.

ಸ್ವಾಮೀಜಿಗಳು ಸಹ ಬಿಜೆಪಿಯವರು ಬಂದಾಗ ಆ ಪಕ್ಷದವರಂತೆ, ನಾವು ಬಂದಾಗ ನಮ್ಮಂತೆ ಇರಬಾರದು. ಬಿಜೆಪಿಯ ನಾಲ್ಕೈದು ಜನರ ಮೇಲೆ ಮಾತ್ರ ವಿಶ್ವಾಸವಿಡಿ. ಆದರೆ, ಬಿಜೆಪಿಯ ಎಲ್ಲರನ್ನು ನೀವು ನಂಬಲೂಬೇಡಿ ಎಂದು ವಾಲ್ಮೀಕಿ ಪೀಠದ ಶ್ರೀಗಳಿಗೆ ಕಿವಿಮಾತು ಹೇಳಿದರು.