ಎಸ್ಟಿ ಸಮುದಾಯದವರು ಸಿಎಂ ಆಗಬೇಕೆಂಬುದೇ ನಮ್ಮ ಗುರಿ

Advertisement

ದಾವಣಗೆರೆ: ಮುಂಬರುವ ಯಾವುದೇ ಚುನಾವಣೆಯಲ್ಲೂ ನಾನು ನಿಲ್ಲುವುದಿಲ್ಲ. ನಾಳೆ ನಮ್ಮ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆಂಬುದೇ ನಮ್ಮ ಗುರಿ. ರಾಜಕೀಯ ಸಂಘರ್ಷ ಮಾಡದ ಹೊರತು, ನಾವು ಕೇಳದಿದ್ದರೆ ನಮ್ಮ ಸಮುದಾಯಕ್ಕೆ ಯಾವುದೇ ಅಧಿಕಾರ ಸಿಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಹರಿಹರ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಪಂಗಡದವರಿಗೂ ಮುಖ್ಯಮಂತ್ರಿಯ ಸ್ಥಾನ ಸಿಗಬೇಕು. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಇದೆ. ಅಲ್ಲದೇ ನಮ್ಮ ಸಮುದಾಯದ ಯಾರೇ ಯಾರೇ ಮುಖ್ಯಮಂತ್ರಿಯಾದರೂ ವಾಲ್ಮೀಕಿ ನಾಯಕ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು.
ನಾವೂ ಸಹ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಕೇಳಲು ಹೊರಟಿದ್ದೆವು. ಡಿಸಿಎಂ ಸ್ಥಾನದ ಬಗ್ಗೆ ಮುಂದೆಯೂ ಕೇಳುತ್ತೇವೆ. ಮಗು ಅತ್ತರೆ ತಾನೇ ತಾಯಿ ಹಾಲುಣಿಸುವುದು. ಹಾಗೆಯೇ ನ್ಯಾಯಯುತ ಬೇಡಿಕೆ ಏಕೆ ಕೇಳಬಾರದು? ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಕೇಳಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.