ಏಣಿಯಾಯಿತೇ ಸ್ವದೇಶಿ ಮಂತ್ರ.. ಅಣಕವಾಯಿತೇ ರೈತಗೆ ದುರ್ಭಿಕ್ಷ ವೇಷ

ಜನಾಶಯ
Advertisement

ಕೃಷಿಕೋ ನಾಸ್ತಿ ದುರ್ಭಿಕ್ಷಾಃ… ವೇದಗಳಲ್ಲೇ ಹೇಳಿರುವ ಈ ಪ್ರಚಲಿತ ಉಕ್ತಿ ಬದುಕು ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಿದಾಗ ವಾಸ್ತವಕ್ಕೆ ಸನಿಹ. ಆದರೆ ಕೃಷಿಕನಿಗೆ ಬೆಂಬಿಡದ ಸಂಕಟ- ಸಂಕಷ್ಟಗಳ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಇದರಲ್ಲಿ ಬದಲಾವಣೆಯಾಗಬೇಕಾರುವುದು ನಿಜವೇನೋ…
ಕಳೆದ ಎರಡು ವರ್ಷಗಳಿಂದಂತೂ ಕೃಷಿಕರ ಬಾಳಿನಲ್ಲಿ ನೆಮ್ಮದಿಗಿಂತ ಗೊಂದಲ-ಗೋಜಲೇ ಜಾಸ್ತಿಯಾಗಿ, ಸರ್ಕಾರದ ನೀತಿ-ಧೋರಣೆ ಮತ್ತು ಪ್ರಕೃತಿಯ ಜೊತೆ ಹೋರಾಡಿ ರೈತ ಹೈರಾಣಾಗಿಬಿಟ್ಟಿದ್ದಾನೆ.
ವರ್ಷಗಳ ಹಿಂದೆ ದೇಶದ ಕೆಲ ಕೃಷಿ ನೀತಿಗಳ ಮಾರ್ಪಾಡಿಗೆ ಯತ್ನಿಸಿದಾಗ, ವರ್ಷಗಳ ಪರ್ಯಂತ ಸುದೀರ್ಘ ಹೋರಾಟವೇ ರಾಷ್ಟ್ರ ರಾಜಧಾನಿಯ ಬಳಿ ರೈತರಿಂದ ನಡೆಯಿತು. ಮುಕ್ತ ಮಾರುಕಟ್ಟೆ ನೀತಿಯನ್ನು ಒಪ್ಪದ ಕೃಷಿ ಸಮುದಾಯದ ಹೋರಾಟಕ್ಕೆ ಕೊನೆಗೂ ಪ್ರಭುತ್ವ ಬಾಗಿದರೂ ಕೂಡ ಆ ನಂತರದ ಘಟನಾವಳಿಗಳು, ಮಾತು ಚಂದ, ಬಣ್ಣ ಬೆಡಗು ಅಂದ. ಆದರೆ ರೈತ ಬದುಕಿಗೆ ಬಾಗಿದ್ದೇ ಜಾಸ್ತಿ ಎನ್ನುವಂತಾಯಿತು.
ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ಸ್ವದೇಶಿ ಜಾಗರಣ ಮಂಚ್' ವಿದೇಶಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕಾಲ. ಸ್ಥಳೀಯ ಉತ್ಪನ್ನ ಸ್ಥಳೀಯವಾಗಿಯೇ ಬಳಕೆಯಾಗಬೇಕು ಎನ್ನುವ ಪರಿಕಲ್ಪನೆ ಎಲ್ಲರಲ್ಲೂ ಮೂಡಿತ್ತಷ್ಟೇ. ಎಷ್ಟರ ಮಟ್ಟಿಗೆ ಇದು ಪರಿಣಾಮ ಆಗಿತ್ತೆಂದರೆ, ಸ್ವದೇಶಿ ಜಾಗರಣ ಮಂಚ್‌ನ ರಾಜೀವ್ ದೀಕ್ಷಿತ್ ಸಾವಿಗೆ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖರೇ ಕಾರಣ ಎನ್ನುವ ಆರೋಪ ಆಗ ತೀವ್ರವಾಗಿ ಕೇಳಿಬಂದಿತ್ತು. ಸ್ವದೇಶಿ ಜಾಗರಣ ಮಂಚ್ ಸ್ಥಾಪನೆಯಾಗಿದ್ದು ಬಾಳಾಸಾಹೇಬ್ ದೇವರಸರ ಜನ್ಮದಿನದಂದು. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿರುವ ಬಹುತೇಕ ಅಧಿಕಾರಸ್ತರು, ನೇತೃತ್ವ ವಹಿಸಿರುವವರಿಗೆಸ್ವದೇಶಿ’ ಅಧಿಕಾರಕ್ಕೆ ಏರುವ ಏಣಿಯಾಯಿತು!
ಇಪ್ಪತ್ತನೇ ಶತಮಾನದ ಕೊನೆಯ ದಶಕಕ್ಕೂ, ಇಪ್ಪತ್ತೊಂದನೇ ಶತಮಾನದ ಎರಡನೇ ದಶಕಕ್ಕೂ ನೀತಿ, ಧೋರಣೆ, ವ್ಯವಹಾರಗಳಲ್ಲಿ ಅಜಗಜಾಂತರ ವ್ಯತ್ಯಾಸ. ಈಗೇನಿದ್ದರೂ ಬಹುರಾಷ್ಟ್ರೀಯ ಕಂಪನಿಗಳ, ದೇಶೀಯ ಬಂಡವಾಳಶಾಹಿಗಳ ಅಬ್ಬರ. ಸ್ವದೇಶಿ ಚಳವಳಿ, ಸ್ವದೇಶಿ ಆಂದೋಲನ ಮಂತ್ರಗಳೀಗ ಸವಕಲು ನಾಣ್ಯ.
ಮಾಲ್- ಮಹಲ್, ಇ-ಕಾಮರ್ಸ್, ಡಿಜಿಟಲೀಕರಣಗಳ ದರ್ಬಾರಿನಲ್ಲಿ ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ) ಧ್ವನಿ ಉಡುಗಿ ಹೋಗುತ್ತಿದೆ. ದೀಪಾವಳಿಯ ಪಣತೆ, ಆಕಾಶಬುಟ್ಟಿ, ಹಬ್ಬದ ಶೃಂಗಾರ ಸಾಮಗ್ರಿಗಳು, ಬತ್ತಿ-ಊದುಬತ್ತಿಯಿಂದ ಹಿಡಿದು ಮಸಾಲಾ ಪದಾರ್ಥಗಳೆಲ್ಲವುಗಳನ್ನು ಉತ್ಪಾದಿಸುವರ ಕೈ ಕೆಸರಷ್ಟೇ. ಬಾಯಿ ಮೊಸರಿಲ್ಲ.
ಎಲ್ಲಿ ಹೋಯಿತು ಸ್ವದೇಶಿ ಮಂತ್ರ? ಇದಕ್ಕಾಗಿ ಧ್ವನಿ ಎತ್ತಿದವರೇ ಆ ಧ್ವನಿಯನ್ನೂ ಉಡುಗಿಸಿದರೇ?
ಕೃಷಿಕೋ ನಾಸ್ತಿ ದುರ್ಭಿಕ್ಷಾಃ ಎನ್ನುವುದೇ ಅವರನ್ನು ಅಣಕಿಸುವ, ಅರೆಜೀವಗೊಳಿಸುವ ಕ್ರಿಯೆ ಆಗಬಾರದಲ್ಲ !? ಇತ್ತೀಚೆಗೆ ಸರ್ಕಾರ ಕೆಲ ರೈತ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿತು. ಅದರ ಪ್ರಮಾಣ ೧೫೦ ರೂಪಾಯಿಯಿಂದ ಹೆಚ್ಚೆಂದರೆ ೫೦೦ ರೂಪಾಯಿ. ತಮಾಷೆ ಎಂದರೆ, ಎರಡು ತಿಂಗಳ ಹಿಂದಷ್ಟೇ ರಸಗೊಬ್ಬರದ (ಡಿಎಪಿ) ಬೆಲೆ ೧೨೦೦-೧೯೦೦ ರೂವರೆಗೂ ಏರಿಕೆಯಾಗಿದೆ. ೧೨-೩೨-೧೬ ರಸಗೊಬ್ಬರ ೧೧೮೫ ರೂಪಾಯಿ ಇದ್ದದ್ದು ಈಗ ೧೮೦೦ಕ್ಕೆ ಏರಿದೆ. ದೇಶದ ರೈತ ಒಂದು ಹಂಗಾಮಿಗೆ ೧.೨೦ ಕೋಟಿ ಟನ್ ರಸಗೊಬ್ಬರವನ್ನು ಬಳಸುತ್ತಾನೆ. ಕನಿಷ್ಟ ಎಂದರೂ ೧೫೦ ರೂಪಾಯಿನಷ್ಟು ಗೊಬ್ಬರ ಬೆಲೆ ಏರಿಸಿದರೆ, ಒಂದು ಹಂಗಾಮಿನಲ್ಲಿ ೩,೬೦೦ ಕೋಟಿ ರೂಪಾಯಿ ಹೆಚ್ಚು ಪಾವತಿಸಿದಂತಾಯಿತು. ಈ ಮಧ್ಯೆ ಜಿಎಸ್‌ಟಿ ಮತ್ತಿತರ ತೆರಿಗೆಗಳ ಹೊರೆ ಬೇರೆ. ಅಂದರೆ ಒಂದು ಕ್ವಿಂಟಲ್ ರಸಗೊಬ್ಬರ ಖರೀದಿಗೆ ಒಂದೂವರೆ ಕ್ವಿಂಟಲ್‌ನಷ್ಟು ಭತ್ತವನ್ನು ರೈತ ಮಾರಬೇಕಾಗುತ್ತದೆ!
ಸ್ವದೇಶಿ ಜಾಗರಣ ಮಂಚ್ ಜಾಗೃತಿಯಲ್ಲಿದ್ದಾಗ ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ, ಸ್ಥಳೀಯ ಉತ್ಪನ್ನಗಳಿಂದ ತಯಾರಾದ ಹಸಿ ಗೊಬ್ಬರಗಳ ಬಗ್ಗೆ ವ್ಯಾಪಕ ಪ್ರಚಾರ ನಡೆದಿತ್ತಲ್ಲವೇ? ಈಗ ಅದರ ಅನುಷ್ಟಾನಕ್ಕೇ ಪ್ರತ್ಯೇಕ ಕಾರ್ಯಪಡೆಯೊಂದಿದೆ. ಅದರ ಕೆಲಸ ಊಹಿಸಿಕೊಳ್ಳಿ.
ಕರ್ನಾಟಕದೆಲ್ಲೆಡೆ ಕಬ್ಬು ಬೆಳೆಗಾರರು ಈಗ ಎಸ್‌ಎಪಿ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಎದುರು ಧರಣಿ, ಸತ್ಯಾಗ್ರಹ, ಹೋರಾಟಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ೭೨ ಸಕ್ಕರೆ ಕಾರ್ಖಾನೆಗಳಿವೆ. ಕಬ್ಬಿಗಾಗಿಯೇ ಒಂದು ಸಚಿವಾಲಯವಿದೆ. ಅಧಿಕಾರಿಗಳಿದ್ದಾರೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ನಾಡು. ವರ್ಷದಲ್ಲಿ ೬೨೦ ಲಕ್ಷ ಮೆಟ್ರಿಕ್ ಟನ್‌ನಷ್ಟು ಕಬ್ಬು ಅರೆದು, ೬೦ ಲಕ್ಷ ಮೆಟ್ರಿಕ್ ಟನ್‌ನಷ್ಟು ಸಕ್ಕರೆ ಇಲ್ಲಿ ಉತ್ಪಾದನೆಯಾಗುತ್ತದೆ.
ಸಕ್ಕರೆ ಕಾರ್ಖಾನೆಗಳು, ಅವುಗಳ ಮಾಲೀಕರು, ಪೂರೈಕೆದಾರರು ಕೊಬ್ಬಿದ್ದಾರೆ. ಕೆಲ ಸಕ್ಕರೆ ಉದ್ಯಮಿಗಳು ಹೊಸ ಹೊಸ ಕಾರ್ಖಾನೆಗಳನ್ನು ಸ್ಥಾಪಿಸುತ್ತಲೇ ಇದ್ದಾರೆ. ಇದೇ ವರ್ಷ ಕಿತ್ತೂರು ಕರ್ನಾಟಕ ಭಾಗದಲ್ಲೇ ಮತ್ತೆ ನಾಲ್ಕು ಹೊಸ ಕಾರ್ಖಾನೆಗಳು ತಲೆ ಎತ್ತಲಿವೆ.
ಆದರೆ ವರ್ಷವಿಡೀ ಕಬ್ಬು ಬೆಳೆದ ರೈತರ ಬಾಳಿಗೆ ಕಂಡದ್ದು ಕಹಿ. ಕಳೆದ ಏಪ್ರಿಲ್‌ನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆದ ರೈತರಿಗೆ ಪಾವತಿಸಬೇಕಾಗಿರುವ ಬಾಕಿ ೨,೩೦೦ ಕೋಟಿ ರೂಪಾಯಿಯಷ್ಟಿತ್ತು. ರೈತರ ಹೋರಾಟ, ಸರ್ಕಾರದ ಬೆದರಿಕೆ, ಕಟ್ಟಾಜ್ಞೆಗಳ ಪರಿಣಾಮ ಸಪ್ಟೆಂಬರ ಅಂತ್ಯದೊಳಗೆ ಎಲ್ಲ ಹಣ ಪಾವತಿಸಲಾಗಿದೆ ಎಂದು ಸಕ್ಕರೆ ಸಚಿವರು ಹೇಳಿದ್ದಾರೆ. ಈ ನಡುವೆಯೂ ಇನ್ನೂ ಬಾಕಿ ಉಳಿದುಕೊಂಡಿದೆ ಎಂಬುದು ರೈತರ ಆರೋಪ.
ಅಂದರೆ ಕಾರಣ ಇಷ್ಟೇ. ರಾಜ್ಯದ ೩೯ ಶಾಸಕರು (ಕೆಲ ಪ್ರಭಾವಿ ಸಚಿವರುಗಳೂ ಸೇರಿ) ಸಕ್ಕರೆ ಕಾರ್ಖಾನೆಗಳ ಮಾಲೀಕರು! ಬಡ ಮಂತ್ರಿಯ ಮಾತು ಕೇಳುವವರು ಯಾರು? ಈಗ ರಾಜ್ಯ ಸಲಹಾ ದರದಲ್ಲಿ ಏರಿಕೆ ಮಾಡಿ ಎಂದರೆ ಅಥವಾ ಸಾಗಾಟ ವೆಚ್ಚ ಹೆಚ್ಚಿಸಿ, ಉಪ ಉತ್ಪನ್ನಗಳ ಲಾಭ ರೈತರಿಗೆ ಸಿಗಬೇಕೆಂದು ರೈತರು ಕೋರಿದರೆ, ರೈತರೇ ಸಕ್ಕರೆ ಕಾರ್ಖಾನೆಗಳನ್ನು ನಡೆಸಲಿ ಎಂದು ಉದ್ಯಮಿಯೊಬ್ಬ ಮಂತ್ರಿಗಳ ಸಭೆಯಲ್ಲಿ ಧಿಮಾಕಿನ ಮಾತು ಆಡಿ ಉಚಿತ ಸಲಹೆ ಕೊಟ್ಟರಂತೆ!
ವಿಮಾನಗಳಲ್ಲಿ ಹಾರಾಡುತ್ತ, ಬೆಂಜ್ ಕಾರುಗಳಲ್ಲಿ ತಿರುಗುತ್ತ, ಐಷಾರಾಮಿ ಜೀವನ ನಡೆಸುವ ಸಕ್ಕರೆ ಕಾರ್ಖಾನೆ ಮಾಲೀಕರ ಶ್ರೀಮಂತ ಬದುಕು ಒಂದಾದರೆ, ಕಬ್ಬಿನ ಹೊರೆ ಹೊರುವ ಬಡಪಾಯಿ ಬೆಳೆಗಾರನ ಗೋಳು ಇನ್ನೊಂದು ಬಗೆಯದ್ದು. ಈತ ಕಷ್ಟಪಟ್ಟು ಬೆಳೆದು ಮಾರಿದರೂ ಹಣಕ್ಕಾಗಿ ಅಲೆದಾಟ ತಪ್ಪಿಲ್ಲ. ಹಾಗೆಯೇ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಸಾಲ ನೀಡಿದ ಸಹಕಾರಿ ಸಂಘಗಳು, ಬ್ಯಾಂಕುಗಳು ಮರಳಿ ಬಾರದ ನಷ್ಟದ ಕೂಪಕ್ಕೆ ಬೀಳುವಂತಾಗಿದೆ. ಸಾಲ ಕೊಟ್ಟ ಸಂಸ್ಥೆಗಳು ಇದರ ವಸೂಲಾತಿಗೆ ನಡೆಸಿರುವ ಎಲ್ಲ ಪ್ರಯತ್ನಗಳು ಕಬ್ಬಿಣ ಗಾಣದಲ್ಲಿ ನುಜ್ಜಾಗಿವೆ.
೪೫ ದಿನಗಳಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಜನಕಲ್ಯಾಣದ ಜವಾಬ್ದಾರಿ ಹೊತ್ತ ಸರ್ಕಾರದಿಂದ ಸಕ್ಕರೆ ಉದ್ಯಮಿಗಳ ಕಿವಿ ಹಿಂಡಲೂ ಸಾಧ್ಯವಾಗಿಲ್ಲ.. ಹಳಿಯಾಳ ರೈತರು ೧೫೦ ರೂ ಹೆಚ್ಚಿಸಿಕೊಳ್ಳಲು ಭಾರೀ ಹೋರಾಟ ನಡೆಸಬೇಕಾಯಿತು. ಹಾಗಂತ ಶಾಸಕರು, ಸಂಸದರು, ಸಚಿವರು ಮಾಲಿಕತ್ವದ ಅಥವಾ ಉಸ್ತುವಾರಿಯಲ್ಲಿರುವ ಸಕ್ಕರೆ ಕಾರ್ಖಾನೆಗಳ ಎದುರು ರೈತರು ಹೋರಾಟ ಕಾಣಲೇ ಇಲ್ಲ! ರೈತ ನಾಯಕರ ರಾಜಕಾರಣವೋ, ಭಯಕ್ಕೆ ಬಾಯಿ ಮುಚ್ಚಿದರೋ.. ಗೊತ್ತಿಲ್ಲ.
ಫಸಲ್ ಬಿಮಾ.. ನಂಬಿಕೆ ಕಳೆದುಕೊಂಡಿತೇ!
ಈ ಮಧ್ಯೆ ಪ್ರಕೃತಿಯ ಮುನಿಸು. ಬೆಂಬಿಡದ ಮಳೆಯಿಂದ ರೈತನ ಬದುಕು ಹೈರಾಣಾಗಿದೆ. ಸರ್ಕಾರದ ಫಸಲ್ ಬಿಮಾ ನಂಬಿ ಪ್ರೀಮಿಯಂ ಕಂತುಗಳನ್ನು ಕಟ್ಟಿದ ರೈತನಿಗೆ ಇನ್ನಿಲ್ಲದ ಷರತ್ತುಗಳು ಹಾಗೂ ಕರಾರುಗಳನ್ನು ಒಡ್ಡಿ ವಿಮಾ ಪರಿಹಾರವನ್ನು ನಿರಾಕರಿಸಲಾಗುತ್ತಿದೆ. ಇಲ್ಲೂ ಅಷ್ಟೇ. ವಿಮಾ ಕಂಪನಿಗಳು ಕೊಬ್ಬಿದವು.
ಕರ್ನಾಟಕದ್ದೇ ಉದಾಹರಣೆ ಈಗ ಬಯಲಾಗಿದೆ. ೨೦೧೯-೨೦ರಲ್ಲಿ ೯೮೩೦ ಕೋಟಿ ರೂಪಾಯಿಗಳನ್ನು ರೈತ ಬೆಳೆ ವಿಮೆ ಇಳಿಸಿದರೆ, ಆತನಿಗೆ ಮರು ಪಾವತಿಯಾದದ್ದು ೧೨೩೫ ಕೋಟಿ ರೂಪಾಯಿ ಮಾತ್ರ. ೨೦-೨೧ರಲ್ಲಿ ೬೫೦೦ ಕೋಟಿ ವಿಮೆ ಕಂತು ವಸೂಲಿ ಮಾಡಿರುವ ವಿಮಾ ಕಂಪನಿಗಳು ಕೃಷಿಕನಿಗೆ ಪಾವತಿಸಿದ್ದು ಕೇವಲ ೬೨೧ ಕೋಟಿ. ೨೧-೨೨ರಲ್ಲಿ ೬೬೨೧ ಕೋಟಿ ರೂಪಾಯಿಗಳನ್ನು ಪರಿಹಾರದ ಭರವಸೆಯಿಂದ ರೈತ ಕಂತು ತುಂಬಿದ್ದರೆ, ಮರು ದಕ್ಕಿದ್ದು ಬರೀ ೭೨೭ ಕೋಟಿಯಷ್ಟೇ!
ಫಸಲ್ ಬಿಮಾದ ಗೋಲ್‌ಮಾಲ್ ರೈತರಿಗೆ ಗೊತ್ತಿದ್ದರೂ ಸಹಕಾರಿ ಸಂಸ್ಥೆಗಳ ಸಾಲ ಪಡೆಯುವಾಗ ಕಡ್ಡಾಯವಾಗಿ ವಿಮಾ ಕಂತು ವಿಮಾ ಕಂಪನಿಗಳ ಪಾಲಾಗುತ್ತಿದೆ. ಸ್ವತಃ ಪ್ರಧಾನಿ ನಿತ್ಯ ಫಸಲ್ ಬಿಮಾ ಬಗ್ಗೆ ಪ್ರಚಾರ ನಡೆಸಿದರೂ ರೈತ ಮರುಳಾಗುತ್ತಿಲ್ಲ. ಏಕೆಂದರೆ ಬೆಳೆ ವಿಮೆ ಕೈ ಹಿಡಿಯುತ್ತದೆ ಎನ್ನುವ ವಿಶ್ವಾಸ ರೈತನಿಗಿಲ್ಲ.
ಫಸಲ್ ಬಿಮಾ ಹಣವನ್ನು ಸರಿಯಾಗಿ ಕೊಡಿಸುವಲ್ಲಿ ರಾಜ್ಯ ಸರ್ಕಾರ ಅಸಹಾಯಕವಾಗಿದೆ. ಸ್ವತಃ ರಾಜ್ಯ ಸರ್ಕಾರಕ್ಕೂ ಇದು ವಿಮಾ ಕಂಪನಿಗಳ ಲಾಭದಾಯಕ ಯೋಜನೆ ಎಂಬುದು ಮನವರಿಕೆಯಾಗಿದೆ. ಇದನ್ನು ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಕೂಡ.
ಇಷ್ಟೆಲ್ಲದ ಮಧ್ಯೆ ಈಗ ರಸಗೊಬ್ಬರಕ್ಕೆ ಬ್ರ್ಯಾಂಡ್ ನೀಡುವ ಯೋಜನೆಯೊಂದು ಘೋಷಣೆಯಾಗಿದೆ. ಭಾರತ್ ಬ್ರ್ಯಾಂಡ್'ಅನ್ನು ಎಲ್ಲ ರಸಗೊಬ್ಬರಗಳ ಉತ್ಪನ್ನಗಳಿಗೆ ನೀಡುವುದೇ ಈ ಯೋಜನೆ. ಪಿಎಂ ಜನಧನ್, ಪಿಎಂ ಬಿಮಾ ಯೋಜನೆ, ಪಿಎಂ ಹೆಲ್ತ್‌ಕಾರ್ಡ್, ಪಿಎಂ ಶ್ರಮ ಯೋಜನೆಗಳ ಜೊತೆಗೆ ಈಗಭಾರತ್ ಬ್ರ್ಯಾಂಡ್’! ವಿಭಿನ್ನ ರಸಗೊಬ್ಬರಗಳ ರಸಾಯನದ ಈ ಹೊಸ ಬ್ರ್ಯಾಂಡ್‌ಗೆ ಇನ್ನಷ್ಟೇ ಪ್ರತಿಕ್ರಿಯೆ ದೊರೆಯಬೇಕಾಗಿದೆ!
ಕೃಷಿಕೋ ಸದಾ ದುರ್ಭಿಕ್ಷಃ… ಅಥವಾ ಕೃಷಿಕ ಸದಾ ಶೋಷಿತ